Bengaluru CityCinemaDistrictsKarnatakaLatestSandalwood

‘ರಾಬರ್ಟ್’ ನಂತ್ರ ‘ಯುವರತ್ನ’ನಿಗೂ ತಟ್ಟಿದ ಕೊರೊನಾ ಭೀತಿ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆತಂಕಕ್ಕೀಡುಮಾಡಿದೆ. ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸುಮಾರು 77 ದೇಶಗಳಲ್ಲಿ ಹರಡಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಈ ಕೊರೊನಾ ಎಫೆಕ್ಟ್ ಸ್ಯಾಂಡಲ್‍ವುಡ್‍ಗೂ ತಟ್ಟಿದ್ದು, ‘ರಾಬರ್ಟ್’ ಚಿತ್ರತಂಡದ ಬಳಿಕ ‘ಯುವರತ್ನ’ ಚಿತ್ರತಂಡ ಕೂಡ ವಿದೇಶದಲ್ಲಿ ನಡೆಯಬೇಕಿದ್ದ ಶೂಟಿಂಗ್ ರದ್ದು ಮಾಡಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ `ಯುವರತ್ನ` ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಯುವರತ್ನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು.

3-4 ದಿನಗಳ ಕಾಲ ಯುರೋಪಿನಲ್ಲೇ ಚಿತ್ರತಂಡ ತಂಗಲು ಪ್ಲಾನ್ ಮಾಡಿದ್ದ ಹಿನ್ನೆಲೆ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಮಾಡಲಾಗಿತ್ತು. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ `ಯುವರತ್ನ`ನ ಯುರೋಪ್ ಪ್ರವಾಸ ರದ್ದು ಮಾಡಿದೆ. ಹಣ ಹೋದರೆ ಹೋಗಲಿ ಕೊರೊನಾ ಸಹವಾಸ ಬೇಡಪ್ಪ ಎಂದು ಚಿತ್ರತಂಡ ಸುಮ್ಮನಾಗಿದೆ.

ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ರಾಬರ್ಟ್’ ಚಿತ್ರತಂಡವು ಶೂಟಿಂಗ್‍ಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ಭೀತಿಗೆ ವಿದೇಶ ಪ್ರವಾಸವನ್ನು ಚಿತ್ರತಂಡ ರದ್ದು ಮಾಡಿತ್ತು. ಇದೇ ಬೆನ್ನಲ್ಲೇ ಯುವರತ್ನ ಚಿತ್ರತಂಡ ಕೂಡ ವಿದೇಶದಲ್ಲಿ ನಡೆಯಬೇಕಿದ್ದ ಶೂಟಿಂಗ್ ಪ್ಲಾನ್ ರದ್ದುಮಾಡಿದೆ. ಅದೇ ರೀತಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ‘ಅರ್ಜುನ್ ಗೌಡ’ ಸಿನಿಮಾ ತಂಡ ಕೂಡ ವಿದೇಶದಲ್ಲಿ ಮಾಡಬೇಕಿದ್ದ ಶೂಟಿಂಗ್ ಕ್ಯಾನ್ಸಲ್ ಮಾಡಿದೆ.

ಈ ಹಿಂದೆ `ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸಲಿದ್ದಾರೆ.

ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟಿವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published.

Back to top button