ಯುವರಾಜ್‌ಕುಮಾರ್ (Yuva Rajkumar) ಹಾಗೂ ಶ್ರೀದೇವಿ (Sridevi) ದಂಪತಿ ತಾತನ ಮನೆಯ ಮಡಿಲಲ್ಲಿ ಒಂದು ದಿನ ಕಳೆದಿದ್ದಾರೆ. ದೊಡ್ಮನೆಯ ಮೂರನೇ ತಲೆಮಾರಿನ ಕುಡಿ ಅಣ್ಣಾವ್ರು ಹುಟ್ಟಿ ಬೆಳೆದ ಜಾಗದಲ್ಲಿ ಓಡಾಡಿದ್ದಾರೆ. ಆ ಪುಟ್ಟ ಗುಡಿಸಲಲ್ಲಿ ಜೋಗುಳ ಕೇಳಿಸಿಕೊಂಡಿದ್ದ ರಾಜ್‌ಕುಮಾರ್ ದೇವರನ್ನು ನೆನೆದು ಆಶೀರ್ವಾದ ಬೇಡಿದ್ದಾರೆ. ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಹಾಕಿಕೊಟ್ಟ ಹಾದಿಯಲ್ಲಿ ಹೊಸ ಕುದುರೆ ಓಡುತ್ತಿದೆ. ಏನೆಂದು ಬೇಡಿಕೊಂಡರು ಯುವರಾಜ್‌ಕುಮಾರ್ ? ಅಪ್ಪು ನೆನೆದು ಯಾಕೆ ಭಾವುಕರಾದರು? ಯುವ ಸಿನಿಮಾ ಎಲ್ಲಿಗೆ ಬಂದಿದೆ? ಏನಾಯ್ತು.. ಇಲ್ಲಿದೆ ಅಪ್‌ಡೇಟ್
Advertisement
ಅಣ್ಣಾವ್ರು..ಮೂರು ಅಕ್ಷರಗಳ ಈ ಶಬ್ದ ಕೇಳಿದರೆ ಕನ್ನಡಿಗರು ಎದ್ದು ನಿಲ್ಲುತ್ತಾರೆ. ಅದೊಂದು ಕಣ್ಣಿಗೆ ಕಂಡ ದೇವರನ್ನು ನೆನೆದು ಕಣ್ಣೀರು ಹಾಕುತ್ತಾರೆ. ಇದ್ದರೆ ಇರಬೇಕಪ್ಪಾ ನಮಗೆ ರಾಜ್ಕುಮಾರ್‌ರಂಥ ಮಗ ಎಂದು ಭಾವುಕರಾಗುತ್ತಾರೆ. ಅದು ಅಣ್ಣಾವ್ರು ಗಳಿಸಿದ ಆಸ್ತಿ. ಕನ್ನಡಿಗರ ಮನದಲ್ಲಿ ಬೇರು ಬಿಟ್ಟ ಕಿತ್ತಿ ಒಗೆಯಲಾದ ಶಕ್ತಿ. ರಾಜ್ ಕೇವಲ ಸಿನಿಮಾದಿಂದ ಮಾತ್ರ ನಮ್ಮಲ್ಲಿ ಪ್ರೀತಿ ಹುಟ್ಟಿಸಲಿಲ್ಲ. ಅದನ್ನು ಮೀರಿದ ಜೀವನ ಪಾಠ ಕಲಿಸಿದರು. ಎಷ್ಟೇ ಎತ್ತರಕ್ಕೆ ಬೆಳೆದರೂ ನಿಂತ ನೆಲ ಮರೆಯಬೇಡ ಹತ್ತಿ ಬಂದ ಏಣಿಯನ್ನು ದೂರ ತಳ್ಳಬೇಡ ಇದನ್ನೆಲ್ಲ ಅವರು ಹೇಳಲಿಲ್ಲ. ಹಾಗೆಯೇ ಬದುಕಿ ಬಿಟ್ಟರು. ಆ ಹಾದಿಯಲ್ಲಿ ಶಿವಣ್ಣ, ರಾಘಣ್ಣ- ಅಪ್ಪು ನೀರು ಚೆಲ್ಲುತ್ತಾ ನಡೆದರು. ಇದನ್ನೂ ಓದಿ:‘ಪೊನ್ನಿಯಿನ್ ಸೆಲ್ವನ್’ ಸ್ಟಾರ್ ಜಯಂರವಿ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ, ಕಲ್ಯಾಣಿ ಸಾಥ್
Advertisement
Advertisement
ಅಪ್ಪು…ಅದೊಂದು ಜೀವವನ್ನು ನೆನೆಸಿಕೊಳ್ಳುವುದೇ ಸಣ್ಣ ಕರುಳಿಗೆ ಸಂಕಟ. ಎಲ್ಲೇ ರಾಜರತ್ನನ ಭಾವಚಿತ್ರ ನೋಡಲಿ…ಯಾರೇ ಆಗಿರಲಿ…ಕ್ಷಣ ಮನಸು ಕಲ್ಲವಿಲ…ಅಲ್ಲಕಲ್ಲೋಲ. ನಿಜಕ್ಕೂ ಪುನೀತ್ ನಮ್ಮ ಜೊತೆ ಇಲ್ಲವಾ? ಅದು ಸಾಧ್ಯವಾಗಿದ್ದು ಸತ್ಯವಾ? ಈ ಪ್ರಶ್ನೆಗಳೆ ಎದೆಯಲ್ಲಿ ಜೋಕಾಲಿ. ಏನು ಮಾಡಿದರೂ…ಎಷ್ಟು ನಿತ್ರಾಣವಾದರೂ. ಇಲ್ಲ…ಅಪ್ಪು ಮತ್ತೆ ಕಣ್ಣ ಮುಂದೆ ನಿಲ್ಲುವುದಿಲ್ಲ. ಅದನ್ನು ಅರಗಿಸಿಕೊಳ್ಳಲಾಗದೆ ನಾವು ಹೈರಾಣುವುದು ತಪ್ಪುವುದಿಲ್ಲ. ಇದೇ ಅಪ್ಪು, ಅಪ್ಪಾಜಿಯ ಜೀವಜ್ಜೀವ ಕೂಸಾಗಿದ್ದರು. ಕೊನೇ ಮಗ…ಅಚ್ಚೆ ಅಚ್ಚೇ ಮಾಡಿ ಬೆಳೆಸಿದ ಕಂದನ ಸಾವನ್ನು ಅಪ್ಪ ಅಮ್ಮ ನೋಡಲಿಲ್ಲವಲ್ಲ…ಅದೇ ಅಗತ್ಯಕ್ಕಿಂತ ಹೆಚ್ಚಲ್ಲದ ಸಮಾಧಾನ.
Advertisement
ಪುನೀತ್ ಕೂಡ ಗಾಜನೂರಿಗೆ (Gajunuru) ಹೋಗುತ್ತಿದ್ದರು. ಬಾಲ್ಯದಲ್ಲಿ ಹಳ್ಳಿಯ ಮಣ್ಣಿನಲ್ಲಿ ಮಗುವಾಗುತ್ತಿದ್ದರು. ತೋಟದಲ್ಲಿ ಹಣ್ಣು ಕೀಳುತ್ತಾ, ಬಾವಿಯಲ್ಲಿ ಈಜಾಡುತ್ತಾ, ಹೊಟ್ಟೆ ಹಸಿದಾಗ ಅಜ್ಜಿ ಕೈ ತುತ್ತು ಹೊಟ್ಟೆಗಿಳಿಸುತ್ತಾ ಬೆಳೆದರು. ದೊಡ್ಡವರಾದ ಮೇಲೂ ಆ ನೆನಪನ್ನು ಅಳಿಸಿ ಹಾಕಲಿಲ್ಲ. ಗಾಜನೂರಿನ ಸುತ್ತ ಮುತ್ತ ಶೂಟಿಂಗ್ ನಡೆದರೆ ಸಾಕು…ಅಪ್ಪ ಹುಟ್ಟಿದ ಮನೆಯ ಕದ ತಟ್ಟುತ್ತಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ ಯುವರಾಜ್‌ಕುಮಾರ್. ತಾತನ ಜೊತೆ ಇದೇ ಹಳ್ಳಿಯಲ್ಲಿ ಓಡಾಡಿದ್ದು, ತುತ್ತು ಗಂಟಲಿಗೆ ಇಳಿಸಿದ್ದನ್ನು ನೆನೆಯುತ್ತಾರೆ. ಅಪ್ಪು ಚಿಕ್ಕಪ್ಪನ ಹೆಗಲ ಮೇಲೆ ಕುಂತಿದ್ದು…ಎಲ್ಲವೂ ಈಗತಾನೇ ಅರಳಿದ ಹೂವಿನ ಘಮಲು. ಮತ್ತೆ ಅದೇ ಗುಡಿಸಲಿ ಮುಂದೆ ಯುವ ದಂಪತಿ…
ಯುವರಾಜ್‌ಕುಮಾರ್, ಶ್ರೀದೇವಿ…ಇಬ್ಬರೂ ಬಿಡುವು ಮಾಡಿಕೊಂಡು ಗಾಜನೂರಿಗೆ ಹೋಗಿದ್ದಾರೆ. ಊರಿನ ತುಂಬಾ ಸುತ್ತಾಡಿದ್ದಾರೆ. ಬಾಲ್ಯದ ನೆನಪುಗಳಿಗೆ ಮರು ಜೀವ ನೀಡಿದ್ದಾರೆ. ತಾತನ ಜೊತೆ ಬಂದಿದ್ದು ಸಂಭ್ರಮ.ಅಪ್ಪು ಜೊತೆ ಇರಲಾರದ್ದು ತೀರಲಾಗದ ಸಂಕಟ. ಎರಡನ್ನೂ ಒಟ್ಟೊಟ್ಟಿಗೇ ಅನುಭವಿಸುತ್ತಾ. ಆ ಇಬ್ಬರು ದೇವರ ಆಶೀರ್ವಾದ ಬೇಡಿದ್ದಾರೆ. ನಿಮ್ಮ ಹೆಸರನ್ನು ಉಳಿಸಿ ಬೆಳೆಸುವ ಶಕ್ತಿ ಕೊಡು ಎಂದು ಕೈ ಮುಗಿದಿದ್ದಾರೆ. ಕಾರಣ ಯುವ ಸಿನಿಮಾ ಕೆಲವೇ ತಿಂಗಳಲ್ಲಿ ಮೆರವಣಿಗೆ ಹೊರಡಲಿದೆ. ಅಪ್ಪು ಬಿಟ್ಟು ಹೋದ ಜಾಗವನ್ನು ತುಂಬಬೇಕಾದ ಅಗತ್ಯ ಹಾಗೂ ಜವಾಬ್ದಾರಿ ಯುವ ಹೆಗಲ ಮೇಲಿದೆ. ದೊಡ್ಮನೆ ಬಾವುಟ ಹಾರಿಸುವ ಶಪಥ ಬಾಕಿ ಇದೆ.
‘ಯುವ’ (Yuva Kannada Film) ಚಿತ್ರ ಈಗಾಗಲೇ ಶೇಕಡಾ ಐವತ್ತರಷ್ಟು ಮುಗಿದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ಕ್ಯಾಮೆರಾ ಹಿಂದೆ ನಿಂತು…ಯುವ ರಾಜನ ಕಿರೀಟಕ್ಕೆ ಮುತ್ತಿನ ಹರಳನ್ನು ಪೋಣಿಸುತ್ತಿದ್ದಾರೆ. ಯುವ ಕೂಡ ಅಷ್ಟೇ ನಿಯತ್ತಿನಿಂದ ಬಣ್ಣ ಹಚ್ಚುತ್ತಿದ್ದಾರೆ. ಹೊಂಬಾಳೆ ಸಂಸ್ಥೆ (Hombale Films) ಖಜಾನೆ ತೆಗೆದು ಕುಳಿತಿದೆ. ಎಲ್ಲರ ಕಣ್ಣಲ್ಲಿ ಮನಸಲ್ಲಿ ಒಂದೇ ಒಂದು ಆಸೆ ಒಂದೇ ಒಂದು ಗುರಿ ಅದೇ ಯುವರಾಜನ ಮಹಾ ಜಾತ್ರೆ. ಕನ್ನಡಿಗರು ಮತ್ತೆ ದೊಡ್ಮನೆಯ ಕುಡಿಯನ್ನು ಹೊತ್ತು ಮೆರೆಸಬೇಕು. ಅಪ್ಪು ನೋವನ್ನು ಮರೆಸಬೇಕು. ಇದಷ್ಟೇ ಕಾಳಜಿ ಕಕ್ಕುಲಾತಿ. ಅಣ್ಣಾವ್ರ ಮೊಮ್ಮಗ, ಅಪ್ಪು ಚಿಕ್ಕಪ್ಪನ ಮಗನಿಗೆ ನವಿಲು ಗರಿ ಬೀಸಣಿಕೆ ಬೀಸದಿರುತ್ತಾರಾ ಕನ್ನಡಿಗರು?