ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಚಿತ್ತಾರ ಬಿಡಿಸಿದ ಯುವಾ ಬ್ರಿಗೇಡ್

Public TV
2 Min Read
rcr yuva brigade 1

ರಾಯಚೂರು: ಸಾಮಾನ್ಯವಾಗಿ ಬಸ್ ನಿಲ್ದಾಣಗಳ ಗೋಡೆಗಳು ಅಂದರೆ ಮೂತ್ರವಿಸರ್ಜನೆ ಮಾಡುವ ಸ್ಥಳವಾಗಿ ಬಹುತೇಕ ಕಡೆ ಮಾರ್ಪಟ್ಟಿವೆ. ಪಕ್ಕದಲ್ಲೇ ಶೌಚಾಲಯವಿದ್ದರೂ ನಿರ್ವಹಣೆ ಸರಿಯಿಲ್ಲ ಅಂತ ಜನರು ಗೋಡೆಗಳ ಮೇಲೆ ಮೂತ್ರ ಮಾಡಿ ಹೊರಟುಹೋಗುತ್ತಾರೆ. ಇಲ್ಲಿ ಮೂತ್ರ ಮಾಡಬಾರದು ಅಂತ ಎಷ್ಟೇ ದೊಡ್ಡ ಅಕ್ಷರದಲ್ಲಿ ಬರೆದರೂ ಯಾರೂ ತಲೆಕೆಡಿಸಿಕೊಳ್ಳಲ್ಲ. ಹೀಗಾಗಿ ಸಾರ್ವಜನಿಕ ಆಸ್ಥಿಯನ್ನು ಕಾಪಾಡಲು ಯುವಾ ಬ್ರಿಗೇಡ್ ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಅಂದದ ಚಿತ್ತಾರ ಬಿಡಿಸಿ ಎಲ್ಲರ ಗಮನ ಸೆಳೆದಿದೆ.

rcr yuva brigade

ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಗೋಡೆಗೆ ಮೂತ್ರ ಮಾಡಲು ಬರುವ ಜನ ವಾಪಸ್ ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಯುವಾ ಬ್ರಿಗೇಡ್‍ನ ಉತ್ಸಾಹಿ ಯುವಕರ ಶ್ರಮದಿಂದ ಮೂತ್ರವಿಸರ್ಜನೆಯಿಂದ ಗಬ್ಬುನಾರುತ್ತಿದ್ದ ಗೋಡೆಗಳು ಅಂದದ ಚಿತ್ತಾರಗಳಿಂದ ಕಂಗೊಳಿಸುತ್ತಿದೆ. ಗೋಡೆಗಳ ಪಕ್ಕದಲ್ಲಿ ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ಸಾರ್ವಜನಿಕರು ಈಗ ಗೋಡೆಗಳ ಮೇಲಿನ ಚಿತ್ರಗಳತ್ತ ಕಣ್ಣಾಯಿಸಿ ಹೋಗುತ್ತಿದ್ದಾರೆ.

rcr yuva brigade 2

ಕಳೆದ ಐದು ವಾರಗಳಿಂದ ಪ್ರತಿ ರವಿವಾರ ಸುಂದರ ಸ್ವಚ್ಛ ರಾಯಚೂರಿಗಾಗಿ ಶ್ರಮದಾನ ಮಾಡುತ್ತಿರುವ ಯುವಾ ಬ್ರಿಗೇಡ್‍ನ ಹತ್ತು ಜನ ಸದಸ್ಯರು, ಮೊದಲೆರಡು ವಾರ ಕೇವಲ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ನಂತರ ಒಂದು ವಾರ ಬಣ್ಣ ಬಳಿದರು. ಕಳೆದೆರಡು ವಾರಗಳಿಂದ ಸುಂದರ ಕಲಾಕೃತಿಗಳನ್ನ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಅನಾವರಣಗೊಳಿಸುತ್ತಿದ್ದಾರೆ. ರಜಾದಿನವಾದ ಪ್ರತಿ ರವಿವಾರ ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಯುವಾ ಬ್ರಿಗೇಡ್ ಸದಸ್ಯರು ಸೇವಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೋಡೆಗಳ ಮೇಲೆ ಗಿಡಗಳು, ಪರಿಸರ, ಹಳ್ಳಿಗಾಡಿನ ಸೊಗಡಿನ ಚಿತ್ರಗಳನ್ನ ಬಿಡಿಸಲಾಗುತ್ತಿದೆ. ಅದರ ಜೊತೆಗೆ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ಆರ್‍ಟಿಪಿಎಸ್, ಹಟ್ಟಿ ಚಿನ್ನದ ಗಣಿ, ಕಲ್ಲಾನೆ, ಕೋಟೆ, ಸಾಲುಮರದ ತಿಮ್ಮಕ್ಕ ಹಾಗೂ ದೇಶಭಕ್ತಿ ಸಾರುವ ಕಲಾಕೃತಿಗಳು ಗೋಡೆಗಳ ಮೇಲೆ ಚಿತ್ರಿಸಿರುವುದು ಸಾರ್ವಜನಿಕರನ್ನ ಆಕರ್ಷಿಸುತ್ತಿವೆ.

ಯುವಾ ಬ್ರಿಗೇಡ್‍ನ ಸದಸ್ಯರು ತಮ್ಮ ಮುಂದಿನ ಕೆಲಸಗಳು ಹಾಗೂ ಅಗತ್ಯವಾಗಿ ಬೇಕಿರುವ ಸಹಾಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನ ಹರಿಬಿಡುತ್ತಾರೆ. ಆಸಕ್ತರು ಮುಂದೆ ಬಂದು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದರಿಂದ ಬಣ್ಣ, ಬ್ರೆಷ್ ಸೇರಿದಂತೆ ಇತರೆ ಖರ್ಚುಗಳು ಸರಿದೂಗುತ್ತವೆ. ಇನ್ನೂ ಹೆಚ್ಚು ಜನ ಕೈಜೋಡಿಸಿ ಶ್ರಮದಾನದಲ್ಲಿ ಭಾಗವಹಿಸಲು ಮುಂದೆ ಬರಬೇಕು ಆಗ ಸುಂದರ ನಗರ ಸೃಷ್ಟಿಸಲು ಸಾಧ್ಯ ಎಂದು ಯುವಾ ಬ್ರಿಗೆಡ್‍ನ ರಾಯಚೂರು ಜಿಲ್ಲಾ ಸಂಚಾಲಕ ಲಕ್ಷ್ಮಣ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧೀಜಿ 150ನೇ ವರ್ಷಾಚರಣೆ ಹಿನ್ನೆಲೆ ರಾಯಚೂರು ರೈಲ್ವೇ ನಿಲ್ದಾಣವನ್ನ ಗಾಂಧೀಜಿ ಬದುಕನ್ನ ಸಾರುವ ಚಿತ್ರಕಲೆಗಳ ಮೂಲಕ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಿರುವುದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬಸ್ ನಿಲ್ದಾಣದ ಗೋಡೆಗಳನ್ನ ಸುಂದರಗೊಳಿಸುವ ಕಾರ್ಯಕ್ಕೆ ಕೈಹಾಕಿ ಯುವಾ ಬ್ರಿಗೇಡ್ ಯಶಸ್ವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *