ಮಂಗಳೂರು: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಸಂಘಟನೆಯ ಸ್ವಯಂ ಸೇವಕರು ಕುಮಾರಧಾರ ನದಿಯ ದರ್ಪಣ ತೀರ್ಥದಲ್ಲಿ ಸ್ವಚ್ಫತಾ ಕಾರ್ಯ ನಡೆಸಿದ್ದು, ಈ ವೇಳೆ ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆಯಾಗಿದೆ.
ಕುಮಾರಧಾರಾ ನದಿಯಲ್ಲಿ ಶೇಖರಗೊಂಡಿದ್ದ 20ಕ್ಕೂ ಹೆಚ್ಚು ಟ್ರಾಕ್ಟರ್ ಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಸುಮಾರು 10 ಸಾವಿರ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನದಿಯಿಂದ ಎತ್ತಲಾಗಿದ್ದು, ಇವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಸಿಕ್ಕಿವೆ. ಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಇದ್ದರೂ ಯಾತ್ರಾರ್ಥಿಗಳು ಮೋಜಿಗಾಗಿ ಕ್ಷೇತ್ರಕ್ಕೆ ಬಂದು ಕುಡಿದು ಬಾಟಲಿಗಳನ್ನು ಎಸೆದಿರುವುದು ಸಾಬೀತಾಗಿದೆ.
Advertisement
Advertisement
ಸುಬ್ರಹ್ಮಣ್ಯದಲ್ಲಿ 12 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ತೆರೆದಿದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದೀಗ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಸಿದ್ದು ಯಾತ್ರಿಗಳು ಇವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
Advertisement
ಸೂಲಿಬೆಲೆಯವರು ಫೇಸ್‍ಬುಕ್ ನಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ನಡೆಸಿದ ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Advertisement
ಪೋಸ್ಟ್‌ನಲ್ಲಿ ಏನಿದೆ?
ಎರಡು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಬಳಿಯಿರುವ ಕುಮಾರಧಾರ ನದಿ ಸ್ವಚ್ಛತೆಯಲ್ಲಿ ಭಾಗಿಯಾಗಿ ಮನಸ್ಸು ವಿಹ್ವಲಗೊಂಡಿದೆ. ದೇವಸ್ಥಾನದ ಹಿಂಬದಿಯಲ್ಲಿ ದರ್ಪಣ ತೀರ್ಥವೆಂದು ಕರೆಯಲ್ಪಡುವ ಈ ನದಿ ಅಕ್ಷರಶಃ ಚರಂಡಿಯಾಗಿಬಿಟ್ಟಿದೆ. ಕಸ, ತ್ಯಾಜ್ಯವಲ್ಲದೇ ಮಲ ವಿಸರ್ಜನೆಗೂ ಇದೇ ಜಾಗವನ್ನು ಬಳಸುತ್ತಿರುವುದು ದುರದೃಷ್ಟಕರ. ನದಿ ಸ್ವಚ್ಛತೆಯಲ್ಲಿ ಇಷ್ಟು ಕೊಳಕು ರಾಡಿಯನ್ನು ಕಂಡು ಬೇಸರಗೊಳ್ಳುತ್ತಿರುವುದು ಬಹುಶಃ ಇದು ಮೊದಲನೇ ಬಾರಿ ಎನಿಸುತ್ತದೆ.
ಸ್ನಾನಘಟ್ಟದ ಪರಿಸ್ಥಿತಿ ಭಿನ್ನವಲ್ಲ. ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರುಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರಗೆಸೆದಿದ್ದೇವೆ. 2.5 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನ ಮಾಡಿದ್ದೇವೆ. ಕನಿಷ್ಠ 10,000 ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 3,000ಕ್ಕೂ ಹೆಚ್ಚು ಹೆಂಡದ ಬಾಟಲಿಗಳೇ ಇವೆ.
ಸ್ಥಳೀಯ ವರ್ತಕರಿಗೆ ಈ ಕುರಿತಂತೆ ಮಾಹಿತಿ ಕೊಟ್ಟು ಪರಿಸರ ಕಾಪಾಡಿಕೊಳ್ಳುವಂತೆ ಹೇಳಿದರೆ ಮುಕ್ಕಾಲು ಪಾಲು ಜನ ಅತ್ಯಂತ ಕೆಟ್ಟದಾಗಿಯೇ ನಡೆದುಕೊಂಡಿದ್ದಾರೆ. ಮುಜರಾಯಿ ಇಲಾಖೆಗೆ ದೇವಸ್ಥಾನ ಕೊಟ್ಟಿದ್ದೇ ತಪ್ಪಾಯ್ತೇನೋ ಎಂದೆನಿಸುವಷ್ಟು ಅಸಹನೆ ಇದು.
12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ. ನೀವು ತೀರ್ಥವೆಂದು ಸ್ನಾನ ಮಾಡುವ ಕುಮಾರಧಾರ ಸ್ನಾನಘಟ್ಟದಲ್ಲಿಯೇ ಚರಂಡಿಯಾಗುವುದನ್ನು ಕಣ್ಣಾರೆ ನೋಡಬಹುದು. ಕುಕ್ಕೆ ಸುಬ್ರಹ್ಮಣ್ಯದ ಉಳಿವಿಗಾಗಿ ನಾವು ಈಗ ಮಹತ್ವದ ಪ್ರಯಾಣ ಮಾಡಬೇಕಾಗಿದೆ. ದಯಮಾಡಿ ಎಲ್ಲರೂ ಕೈಜೋಡಿಸಿ.