– ದೀಪ ಹಚ್ಚಿ ಮನೆ ಹಸ್ತಂತರಿಸಿದ ಚಕ್ರವರ್ತಿ ಸೂಲಿಬೆಲೆ
– 1.25 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ
ಶಿವಮೊಗ್ಗ: ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಅಜ್ಜ-ಅಜ್ಜಿಗೆ ಶಿವಮೊಗ್ಗದ ಯುವಾ ಬ್ರಿಗೇಡ್ ಸಂಘಟನೆ ತಂಡ ಮತ್ತು ನಿವೇದಿತಾ ಪ್ರತಿಷ್ಠಾನ ತಂಡ ಮನೆಯನ್ನು ನಿರ್ಮಿಸಿಕೊಟ್ಟಿದ್ದು ಇಂದು ಮನೆಯ ಗೃಹ ಪ್ರವೇಶ ಸಮಾರಂಭ ನಡೆಯಿತು.
ರಾಜ್ಯದಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕಂಡು ಕೇಳರಿಯದ ಭೀಕರ ಪ್ರವಾಹ ಬಂದು ಸಾಕಷ್ಟು ಹಾನಿ ಮಾಡಿತ್ತು. ಮಳೆ ಹೆಚ್ಚಾದ ಕಾರಣ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಕೂಡ ತುಂಗಾ ನದಿ ಉಕ್ಕಿ ಹರಿದು, ರಾಜಕಾಲುವೆಗಳ ಮೂಲಕ ಅದೆಷ್ಟೋ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ಬಡಾವಣೆಯ ನಿವಾಸಿ ವೃದ್ಧ ದಂಪತಿ ಮುನಿಯಪ್ಪ ಹಾಗೂ ನರಸಮ್ಮ ಕೂಡ ನೆರೆ ಅವಘಡಕ್ಕೆ ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು.
Advertisement
Advertisement
ಈ ವೇಳೆ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಈ ಅಜ್ಜ-ಅಜ್ಜಿಯ ನೆರವಿಗೆ ಧಾವಿಸಿದ್ದು, ಗುಡಿಸಲು ಬಿದ್ದು ಜೀವನವೇ ಹೋಯ್ತು ಎಂದುಕೊಂಡಿದ್ದ ವೃದ್ಧ ದಂಪತಿಗೆ ಆಸರೆಯಾಗಿ ‘ನಮ್ಮನೆ’ ಹೆಸರಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಯಾವುದಕ್ಕೂ ಕೊರತೆಯಾಗದಂತೆ, ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಟ್ಟು ಸಾರ್ಥಕತೆ ಮೆರೆದಿದ್ದಾರೆ. ಈ ಮನೆಯ ಗೃಹಪ್ರವೇಶಕ್ಕೆ ಇಂದು ಯುವಾ ಬ್ರಿಗೇಡ್ ಸಂಘಟನೆಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ದೀಪ ಹಚ್ಚಿ ಮನೆಯನ್ನು ಹಸ್ತಾಂತರಿಸಿದ್ದಾರೆ.
Advertisement
ಕಳೆದೆರೆಡು ತಿಂಗಳಿನಿಂದ ಮಳೆಗೆ ಬಿದ್ದಿದ್ದ ಗುಡಿಸಲು ಮುಂಭಾಗದಲ್ಲೇ ಇರುವ ದೇವಾಲಯದಲ್ಲಿ ಈ ವೃದ್ಧ ದಂಪತಿ ವಾಸವಾಗಿದ್ದು, ಅಲ್ಲಿಯೇ ಜೀವನದ ಬಂಡಿ ಸಾಗಿಸುತ್ತಿದ್ದರು.
Advertisement
ಈ ವೇಳೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು, ಯುವಾ ಬ್ರಿಗೇಡ್ ಸಂಘಟನೆ ತಂಡ ಮತ್ತು ನಿವೇದಿತಾ ಪ್ರತಿಷ್ಠಾನ ತಂಡದ ನೆರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗೆ ಸಹಾಯ ಮಾಡಲು ತೀರ್ಮಾನ ಮಾಡಿದ್ದೆವು. ಮಹಾ ಪ್ರವಾಹ-ಯುವ ಸಹಾಯ ಎಂಬ ಯೋಜನೆಯಡಿಯಲ್ಲಿ ಈ ರೀತಿ ಹಲವಾರು ಜನರಿಗೆ ಇವರು ತಮ್ಮ ಯುವ ಬ್ರಿಗೇಡ್ ತಂಡದ ಮೂಲಕ ಸ್ಪಂದಿಸಲಾಗುತ್ತಿದೆ. ಇವರ ಯೋಜನೆಯಂತೆ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 10 ಸಾವಿರ ರೂ. ಸಹಾಯ ಮಾಡುತ್ತಿದ್ದು, ರಾಜ್ಯದಲ್ಲಿ ಕಷ್ಟದಲ್ಲಿರುವ ಸೂರು ಕಳೆದುಕೊಂಡಿರುವ ಆಯ್ದ ಕುಟುಂಬಕ್ಕೆ ಸೂರು ಒದಗಿಸುವ ಕೆಲಸ ಕೂಡ ಮಾಡುತ್ತಿದ್ದೇವೆ. ಅದರಂತೆ ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದು ಶಿವಮೊಗ್ಗದ ಮುನಿಯಪ್ಪ ಮತ್ತು ನರಸಮ್ಮ ದಂಪತಿಗೆ ಇಂದು ಸೂರನ್ನು ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದರು.
#MahaPravahYuvaSahay
Yuva Brigade took an initiative to re-build an elderly couple's home at Bapuji Nagar in Shivamogga City that was collapsed during recent flood.
We've completed it in time & Today, House Warming ceremony was there. The elderly couple were very happy!@astitvam pic.twitter.com/fzB08Xfvsb
— Yuva Brigade (@yuva_brigade) November 15, 2019
ವಿದ್ಯುತ್ ಸಂಪರ್ಕ ಕೂಡ ಇಲ್ಲದ ಗುಡಿಸಲಲ್ಲಿ ವಾಸವಾಗಿ ಅದನ್ನೂ ನೆರೆಯಿಂದ ಕಳೆದುಕೊಂಡಿದ್ದ ಅಜ್ಜ-ಅಜ್ಜಿಯ ನೂತನ ಮನೆಗೆ ವಿದ್ಯುತ್ ಸಂಪರ್ಕವನ್ನ ಕೂಡ ಕೊಡಿಸಲಾಗಿದೆ. ನಗರದ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರ ಆಸಕ್ತಿಯಿಂದಾಗಿ ಇದೀಗ ತಮ್ಮ ಬಾಳ ಪಯಣದ ಇಳಿ ಸಂಜೆಯಲ್ಲಿರುವ ವೃದ್ಧ ದಂಪತಿ ಬೆಳಕು ಕಾಣುವಂತಾಗಿದೆ.