ಮಡಿಕೇರಿ: ಮಂಜಿನ ನಗರಿಯಲ್ಲಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗಿದ್ದು, ಬೇವು- ಬೆಲ್ಲದ ಸಂಗಮದ ಈ ಹೊಸ ವರ್ಷವನ್ನು ವಿಶೇಷ ದೈವ ಕೋಲಾರಾಧನೆ ಮೂಲಕ ಬರಮಾಡಿಕೊಳ್ಳಲಾಯಿತು.
ಪ್ರಕೃತಿ ಮಡಿಲು ಕೊಡಗಿನಲ್ಲಿ ನಡೆದ ದೇವರ ಉತ್ಸವ ಯುಗಾದಿಯ ಬೆರಗನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಹೌದು, ರಾತ್ರಿಯಿಡೀ ನಡೆಯೋ ಹತ್ತಾರು ದೈವ ಕೋಲಗಳ ಹಾಡು ಕುಣಿತ, ಸುಮಧುರ ಚಂಡೆನಾದ, ಧಗಧಗಿಸೋ ಬೆಂಕಿಯಲ್ಲಿ ಮಿಂದೇಳೋ ಕೋಲಗಳ ಕಸರತ್ತು ಮಂಜಿನ ನಗರಿಯ ಯುಗಾದಿ ಹಬ್ಬಕ್ಕೆ ಹೊಸ ಚೆಲುವನ್ನು ತಂದುಕೊಟ್ಟಿತ್ತು. ನಾನಾ ಬಗೆಯ ದೈವ ಕೋಲದ ವೈಭವೋಪೇತ ದೃಶ್ಯವಾಳಿಗಳು ದೇವಲೋಕವೇ ಧರೆಗಿಳಿಸಿದಂತೆ ಕಾಣಿಸುತ್ತಿತ್ತು.
Advertisement
Advertisement
ತನ್ನ ಜಾನಪದ ಕಲೆಗಳ ಮೂಲಕ ಜಗತ್ತನ್ನು ಸೆಳೆಯೋ ಕೊಡಗಿನಲ್ಲೀಗ ಕೋಲಾರಾದನೆಯ ಸಮಯ. ಕೇರಳ ಮೂಲದ ದೇವರುಗಳು ಕೊಡಗಿನಲ್ಲಿಯೂ ನೆಲೆಸಿದ್ದು ಬೇಸಿಗೆಯಲ್ಲಿ ಎಲ್ಲೆಡೆ ದೇವರ ತೆರೆ ಗರಿಬಿಚ್ಚುತ್ತವೆ. ಮಡಿಕೇರಿಯ ಮುತ್ತಪ್ಪ ದೇವರ ಜಾತ್ರೆ ಇಡೀ ಜಿಲ್ಲೆಯಲ್ಲಿ ವಿಶಿಷ್ಟವಾದದ್ದು, ಮೂರು ದಿನಗಳ ಈ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಯ ಎರಡನೇ ದಿನದಂದು 14 ದೇವರ ಕೋಲಗಳು ನಡೆಯುತ್ತವೆ. ಮುತ್ತಪ್ಪನ್, ತಿರುವಪ್ಪನ್, ವಿಷ್ಣುಮೂರ್ತಿ, ಶ್ರೀ ಶಿವಭೂತಂ, ಕುಟ್ಟಿಚಾತನ್, ಪೊವ್ವಾದಿ, ಮಹಾಗುಳಿಗ, ಶ್ರೀಯಕ್ಷಿ ದೈವಕೋಲಗಳು ರಾತ್ರಿಯಿಡಿ ಬಗೆ ಬಗೆಯ ವೇಷಧರಿಸಿ, ಕೇರಳದ ವಿಶಿಷ್ಟ ಚೆಂಡೆವಾದ್ಯಕ್ಕೆ ಕುಣಿಯುತ್ತಾ ಭಕ್ತರನ್ನು ಭಾವಪರವಶಗೊಳಿಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ ಮುಂಜಾನೆ ವೇಳೆಗೆ ಭಕ್ತರು ಹರಕೆಯಾಗಿ ಸಲ್ಲಿಸಿರೋ ಸೌದೆಯಿಂದ ನಿರ್ಮಾಣವಾಗಿರೋ ಬೃಹತ್ ಬೆಂಕಿ ಕೊಂಡದ ಮೇಲೆ ಬೀಳೋ ವಿಷ್ಣುಮೂರ್ತಿ ಕೋಲ ಭಕ್ತರನ್ನು ಮೈನವಿರೇಳಿಸುವಂತೆ ಮಾಡಿದೆ. ದೈವದ ಪವಾಡಕ್ಕೆ ಮನಸೋಲೋ ಭಕ್ತರು ಬೇಡಿದ ವರವ ಕೊಡೋ ದೇವರಿಗೆ ವಂದಿಸುತ್ತಾರೆ. ಹಲವು ದಶಕಗಳಿಂದ ಈ ವಿಶಿಷ್ಟ ದೈವಕೋಲಾರಾಧನೆಗೆ ನಡೆಯುತ್ತಿದ್ದು, ಇದನ್ನು ನೋಡಲು ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ತೆಂಗಿನ ಗರಿಗಳಿಂದ ಸಿದ್ಧಗೊಂಡ ವಿಶಿಷ್ಟ ಸಿರಿಯನ್ನು ಧರಿಸಿರೋ ವಿಷ್ಣುಮೂರ್ತಿ ಕೋಲ ಚೆಂಡೆನಾದಕ್ಕೆ ನರ್ತಿಸುತ್ತಾ ಬೆಂಕಿಮೇಲೆ ಬೀಳುತ್ತಾ, ಜೊತೆಗಿರೋ ಸಹಚರರು ಎಳೆದಂತೆಲ್ಲಾ ಅಗ್ನಿಪ್ರವೇಶ ಮಾಡಿ ದೈವ ಭಕ್ತರ ಮುಂದೆ ತನ್ನ ಪವಾಡವನ್ನು ಪ್ರದರ್ಶನ ಮಾಡುತ್ತೆ. ತಲೆಗೆ ತಲೆಪ್ಪಾಡಿ, ಕೈಗೆ ಗಗ್ಗರ, ಸೊಂಟಕ್ಕೆ ವಿಶಿಷ್ಟ ಡಾಬು, ಮುಖಕ್ಕೆ ಅಲಂಕಾರ ಮಾಡಿಕೊಂಡು ಬಗೆ ಬಗೆಯ ದೈವ ಕೋಲಗಳು ಸಭಿಕರ ಮುಂದೆ ನರ್ತಿಸಿದವು. ಒಂದೊಂದು ಕೋಲವೂ ಒಂದೊಂದು ರೀತಿಯಲ್ಲಿ ನರ್ತಿಸುತ್ತಾ ಭಕ್ತರನ್ನು ರಂಜಿಸೋದು ಇಲ್ಲಿನ ವಿಶೇಷವಾಗಿದೆ. ಬೆಳಗಿನ ಜಾವ 3ಗಂಟೆ ಸುಮಾರಿಗೆ ಎಂಟ್ರಿಕೊಡೋ ಗುಳಿಗನ್ ದೈವ ಕೋಲ 10 ಅಡಿ ಎತ್ತರದ ತೆಲೆಪ್ಪಾಡಿಯೊಂದಿಗೆ ನೃತ್ಯ ಮಾಡೋದು ಎಲ್ಲರ ಗಮನ ಸೆಳೆದಿದೆ. ಈ ಕೋಲಗಳ ಮೂಲ ದೇವರು ಮುತ್ತಪ್ಪನ್ ಮತ್ತು ತಿರುವಪ್ಪನ್ ಹಾಗು ಕುಟ್ಟಿಚಾತನ್. ಕೆಂಪುಬಣ್ಣದ ವಿಶಿಷ್ಟ ವೇಷದಲ್ಲಿ ಬರುವ ಈ ಕೋಲಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಿತ್ತು. ಅಲ್ಲದೆ ದೇವಾಲಯದ ಆವರಣದಲ್ಲಿ ಕುಣಿದು ಕುಪ್ಪಳಿಸೋ ಮುತ್ತಪ್ಪನ್, ನೆರದಿರೋ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಪರಿ ಭಕ್ತರ ಮನ ಗೆದ್ದಿದೆ.
ಈ ದೈವ ಕೋಲಾರಾಧನೆಗೆ ಕೇರಳದ 38 ಜನರ ತಂಡ ಒಟ್ಟು 14 ದೈವಕೋಲಗಳಿಗೆ ಜೀವ ತುಂಬಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಶಿವನ ಸಂಕೇತವಾದ ಮುತ್ತಪ್ಪ ಹಾಗು ವಿಷ್ಣುವಿನ ಸಂಕೇತವಾದ ತಿರುವಪ್ಪನ್ ಇಲ್ಲಿ ನೆಲೆಸಿರೋದ್ರಿಂದ ಭಕ್ತರ ಎಲ್ಲಾ ಬೇಡಿಕೆಗಳು ಈಡೇರುತ್ತವೆ ಎಂಬುವುದು ಭಕ್ತರ ನಂಬಿಕೆ.
ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದ ಈ ವಿಶೇಷ ಉತ್ಸವಕ್ಕೆ ರಾತ್ರಿಯಿಡೀ ನೆತ್ತಿ ಮೇಲೆ ಸುರಿಯೋ ಮಂಜನ್ನ ಲೆಕ್ಕಿಸದೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ವಿಶೇಷ ಅಲಂಕಾರಗೊಂಡಿದ್ದ ದೇವಾಲಯದ ಆವರಣದಲ್ಲಿ ದೈವಗಳು ಕುಣಿದು ನಲಿಯುತ್ತಿರುವುದನ್ನ ಕಣ್ತುಂಬಿಕೊಳ್ಳಲು ಭಕ್ತರಿಗೆ ದೇವ ಲೋಕವೇ ಧರೆಗಿಳಿದ ಅನುಭವವಾಗಿದೆ ಎಂದರೆ ಸುಳ್ಳಾಗಲ್ಲ. ಬಗೆ ಬಗೆಯ ವೈವಿಧ್ಯಮಯ ನೃತ್ಯಗಳನ್ನು ಮಾಡುತ್ತಾ ಭಕ್ತರಿಗೆ ದರ್ಶನ ನೀಡೋ ದೈವವನ್ನು ಕಣ್ಣು ಮಿಟುಕಿಸದೆ ನೋಡೋ ಭಕ್ತಗಣ ರಾತ್ರಿಯಿಡೀ ದೇವರನ್ನು ನೆನೆಯುತ್ತಾ ಭಕ್ತಿಯ ಅಲೆಯಲ್ಲಿ ಮಿಂದೆದಿದ್ದಾರೆ.