ಯುಗಾದಿ.. ಇದು ಹಿಂದೂಗಳ ಹೊಸ ವರ್ಷ, ಚಂದ್ರಮಾನ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗಿದ್ದು ಈ ದಿನ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನವನ್ನು ಹಿಂದೂಗಳ ಪ್ರಕಾರ ಹೊಸ ವರ್ಷದ ಮೊದಲ ದಿನವೆಂದು ಆಚರಿಸಲಾಗುತ್ತದೆ.
ಹಿಂದೂ ಪಂಚಾಂಗದಲ್ಲಿ ಚೈತ್ರ ಮಾಸದಿಂದಲೇ ವರ್ಷದ ಆರಂಭವಾಗುತ್ತದೆ. ಈ ಹಬ್ಬ ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತದೆ. ಇನ್ನು ಬ್ರಹ್ಮ ಯುಗಾದಿಯ ದಿನ ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎನ್ನಲಾಗುತ್ತದೆ. ಹೀಗಾಗಿ ಯುಗಾದಿ ಹಬ್ಬವನ್ನು ಹೊಸ ವರ್ಷದ ಅಥವಾ ಹೊಸ ಪ್ರಾರಂಭದ ಸಂಕೇತವಾಗಿ ಆಚರಿಸಲಾಗುತ್ತದೆ.
ಗ್ರಹಗತಿಗಳ ಪ್ರಕಾರ, ಯುಗಾದಿಯ ದಿನ ಸೂರ್ಯನು ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಈ ಮೂಲಕ ಸೂರ್ಯ ಮತ್ತು ಚಂದ್ರರ ಹೊಸ ಚಕ್ರ ಪ್ರಾರಂಭಗೊಳ್ಳುತ್ತದೆ.
ನೈಸರ್ಗಿಕವಾಗಿ ಯುಗಾದಿ ಹಬ್ಬವು ಹೊಸತನ ತಂದು ಕೊಡುತ್ತದೆ. ಚೈತ್ರ ಮಾಸದಲ್ಲಿ ವಸಂತ ಋತು ಪ್ರಾರಂಭವಾಗಿ, ನಿಸರ್ಗದಲ್ಲಿಯೂ ಹೊಸತನ ಹುಟ್ಟಿಕೊಳ್ಳುತ್ತದೆ. ಹೊಸ ಎಲೆಗಳು, ಚಿಗುರು ಹಾಗೂ ಇಡೀ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತದೆ. ಹಸಿರಿಗೂ ಉಸಿರು ನೀಡುವ ಈ ಹಬ್ಬ ಯುಗಾದಿಯಾಗಿದೆ.
ಯುಗಾದಿಯಂದು ಪಂಚಾಂಗ ಶ್ರವಣ, ಜ್ಯೋತಿಷಿಗಳು ಹೊಸ ವರ್ಷದ ಭವಿಷ್ಯವನ್ನು ಯುಗಾದಿ ಎಂದು ಪ್ರಾರಂಭಿಸುತ್ತಾರೆ. ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಸಂತ ಕಾಲದ ಜೊತೆ ಜೊತೆಗೆ ಹೊಸ ಬೆಳೆಗಳಿಗೆ ನಾಂದಿ ಹಾಡುತ್ತದೆ.
ಐತಿಹಾಸಿಕವಾಗಿ ಹೇಳುವುದಾದರೆ, ಶಾಲಿವಾಹನ ಇದೇ ದಿನದಂದು ವಿಜಯ ಸಾಧಿಸಿ ತನ್ನ ಆಡಳಿತವನ್ನು ಪ್ರಾರಂಭಿಸುತ್ತಾನೆ. ಹೀಗಾಗಿ ಯುಗಾದಿಯೆಂದು ಶಾಲಿವಾಹನ ಶಕೆ ಪ್ರಾರಂಭವಾಯಿತು. ಹೀಗೆ ಯುಗಾದಿ ಹಲವು ಹೊಸತನಗಳಿಗೆ ಹೊಸ ಹುರುಪನ್ನು ಹಾಗೂ ನವಚೇತನವನ್ನು ನೀಡುವ ಮೂಲಕ ಹೊಸ ವರ್ಷಕ್ಕೆ ಬುನಾದಿಯಾಗುತ್ತದೆ.
ಎಲ್ಲರೂ ಸಂಭ್ರಮದಿಂದ ಆಚರಿಸುವ ಈ ಯುಗಾದಿ ಎಲ್ಲರಲ್ಲೂ ಹೊಸ ಆರಂಭಕ್ಕೆ ದಾರಿ ಮಾಡಿಕೊಡಲಿ, ಹಿಂದೂಗಳ ಹೊಸ ವರ್ಷ ಎಲ್ಲರ ಮನೆ-ಮನಗಳಲ್ಲಿ ಹೊಸತನ್ನು ತರಲಿ.
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!