ಅಮರಾವತಿ: ಆಂಧ್ರಪ್ರದೇಶ ಕಾಂಗ್ರೆಸ್ (Congress) ಮುಖ್ಯಸ್ಥೆ ವೈ.ಎಸ್ ಶರ್ಮಿಳಾ ರೆಡ್ಡಿ (YS Sharmila Reddy) ಅವರು ಗೃಹಬಂಧನದಿಂದ ತಪ್ಪಿಸಿಕೊಳ್ಳಲು ಬುಧವಾರ ರಾತ್ರಿ ವಿಜಯವಾಡದಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿಯೇ ಮಲಗಿ ಕಾಲಕಳೆದಿದ್ದಾರೆ.
ನಿರುದ್ಯೋಗಿ ಯುವಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಶರ್ಮಿಳಾ ಅವರನ್ನು ಬಂಧಿಸುವ ಸಾಧ್ಯತೆ ಇದ್ದಿದ್ದರಿಂದ ಅವರು ರಾತ್ರಿ ಪಕ್ಷದ ಕಚೇರಿಯಲ್ಲಿಯೇ ಉಳಿದುಕೊಂಡಿದ್ದರು. ಈ ಬಗ್ಗೆ ಶರ್ಮಿಳಾ ಅವರು ವಿಜಯವಾಡದ ಆಂಧ್ರರತ್ನ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಳೆದ ಐದು ವರ್ಷಗಳಲ್ಲಿ ಯುವಜನರು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಣು ಶಕ್ತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ಹಣ – ರೇಸ್‌ನಲ್ಲಿ ಟಾಟಾ, ರಿಲಯನ್ಸ್, ಅದಾನಿ
ನಾವು ಭಯೋತ್ಪಾದಕರೇ? ಅಥವಾ ಸಮಾಜ ವಿರೋಧಿ ಶಕ್ತಿಗಳಾ? ಅವರು ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಅವರು (ಸರ್ಕಾರ) ನಮಗೆ ಹೆದರುತ್ತಿದ್ದಾರೆ. ಅವರು ತಮ್ಮನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ನಮ್ಮನ್ನು ತಡೆಯಲು ಪ್ರಯತ್ನಿಸಿದರೂ, ನಿರುದ್ಯೋಗಿಗಳ ಪರವಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈ ಬಗ್ಗೆ ಎಕ್ಸ್‍ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾವು ನಿರುದ್ಯೋಗಿಗಳ ಪರವಾಗಿ ಪ್ರತಿಭಟನೆಗೆ ಕರೆ ನೀಡಿದರೆ, ನೀವು ನಮ್ಮನ್ನು ಗೃಹಬಂಧನದಲ್ಲಿ ಇರಿಸಲು ಪ್ರಯತ್ನಿಸುತ್ತೀರಾ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ನಮಗಿಲ್ಲವೇ? ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ಮಹಿಳೆಯಾಗಿ ನಾನು ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತು ಗೃಹಬಂಧನವನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾತ್ರಿ ಕಳೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಮತ್ತು ಸಂಸದ ಮಾಣಿಕ್ಕಂ ಠಾಗೋರ್ ಅವರು ರಾಜ್ಯ ಸರ್ಕಾರದ್ದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತಜ್ಞರ ಅಭಿಪ್ರಾಯ ಕೇಳದೆ ಬಿಬಿಎಂಪಿಯಿಂದ ಬೋರ್ ಕೊರೆತ – 25 ಬೋರ್ ಫೇಲ್ಯೂರ್