-ಮನೆ ಮುಂದೆ ನಿಲ್ಲಿಸುವ ಕಾರುಗಳೇ ಟಾರ್ಗೆಟ್
-ಆನ್‍ಲೈನ್‍ನಲ್ಲಿ ಕೀ ಓಪನರ್ ಬುಕ್ ಮಾಡ್ತಿದ್ರು
ಬೆಂಗಳೂರು: ಮನೆ ಮುಂದೆ ಕಾರ್ ನಿಲ್ಲಿಸುವ ಸಿಲಿಕಾನ್ ಸಿಟಿ ಮಂದಿ ಎಚ್ಚರದಿಂದಿರಿ. ಯಾಕಂದ್ರೆ ಬೆಂಗಳೂರಿಗೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್ ಕಾಲಿಟಿದ್ದು, ಕೇವಲ 5 ನಿಮಿಷದಲ್ಲಿ ನಿಮ್ಮ ಕಾರು ಕದ್ದು ಎಸ್ಕೇಪ್ ಆಗುತ್ತಾರೆ.
ಹೌದು. ಈ ಖರ್ತನಾಕ್ ಗ್ಯಾಂಗ್ ಯೂಟ್ಯೂಬ್ ಪ್ರಿಯರು, ಯೂಟ್ಯೂಬ್ ನಿಂದಲೇ ಲಕ್ಷಾಂತರ ರೂ. ಸಂಪಾದನೆ ಮಾಡಿದವರು. ಆ ಯ್ಯೂಟ್ಯೂಬ್ ನಿಂದಲೇ ಈಗ ಜೈಲನ್ನೂ ಕೂಡ ಸೇರಿದ್ದಾರೆ. ಆಶ್ಚರ್ಯ ಎನಿಸಿದರು ಇದು ನಿಜ. ಈ ಖತರ್ನಾಕ್ ಕಳ್ಳರು ಯೂಟ್ಯೂಬ್ ನೋಡಿಕೊಂಡೆ ಕಳ್ಳತನ ಮಾಡುತ್ತಾರೆ. ಯಾವ ಕಾರು ಕದಿಯೋಕೆ ಯಾವ ಟೆಕ್ನಿಕ್ ಬೇಕು ಅನ್ನೋದು ಯೂಟ್ಯೂಬ್ ವಿಡಿಯೋಗಳನ್ನು ನೋಡಿಯೇ ಫೈನಲ್ ಮಾಡಿ, ಮನೆ ಮುಂದೆ ನಿಲ್ಲಿಸುವ ಕಾರುಗಳನ್ನು ಸಲೀಸಾಗಿ ಕದ್ದು ಪರಾರಿಯಾಗಿ ಬಿಡುತ್ತಿದ್ದರು.
ಈ ಕುಖ್ಯಾತ ಕಾರು ಕಳ್ಳರ ಗ್ಯಾಂಗ್‍ನಲ್ಲಿದ್ದ ಮೂವರು ಸದ್ಯ ಬಾಗಲಗುಂಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ದಿಲೀಶ್, ಶಾಜಿ ಕೇಶವನ್, ಆಲಿ ಅಹಮ್ಮದ್ ಎಂದು ಗುರುತಿಸಲಾಗಿದೆ. ನಗರದ ಹಲವೆಡೆ ಸುಮಾರು 9ಕ್ಕೂ ಹೆಚ್ಚು ಕಾರನ್ನ ಆರೋಪಿಗಳು ಕಳ್ಳತನ ಮಾಡಿದ್ದರು. ಬಂಧಿತ ಆರೋಪಿ ದಿಲೀಶ್ ಆನ್ ಲೈನ್‍ನಲ್ಲಿ ಕೀ ಓಪನರ್ ಬುಕ್ ಮಾಡಿ, ತರಿಸಿ ಅದರ ಮೂಲಕ ಕಾರುಗಳನ್ನು ಕದಿಯುತ್ತಿದ್ದ. ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರ್ ಗ್ಲಾಸ್‍ನ್ನ ಒಡೆದು ಸ್ಟೇರಿಂಗ್ ವಯರ್‍ಗೆ ಕೀ ಓಪನರ್ ಅಟಾಚ್ ಮಾಡಿ ಈ ಗ್ಯಾಂಗ್ ಕಳ್ಳತನ ಮಾಡುತ್ತಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಮೂವರು ಖತರ್ನಾಕ್ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಯೂಟ್ಯೂಬ್ ಮೂಲಕ ಕಾರು ಕಳ್ಳತನ ಮಾಡುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಈ ಗ್ಯಾಂಗ್ ಕದ್ದ ಕಾರುಗಳನ್ನ ಮಂಗಳೂರು, ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ. ಕಾರು ಕಳ್ಳತನಕ್ಕೂ ಮುನ್ನ ಮೂರು, ಮೂರು ಬಾರಿ ವಿಡಿಯೋ ಅನ್ನು ಕೂಲಂಕುಷವಾಗಿ ನೋಡಿ ಕಳ್ಳತನಕ್ಕೆ ಆರೋಪಿಗಳು ತಯಾರಾಗುತ್ತಿದ್ದರು. ಕಾರು ಯಾವ ಮಾಡೆಲ್ ಇದೆ. ಹೇಗೆ ಕಳ್ಳತನ ಮಾಡಬಹುದು ಅನ್ನೋದನೆಲ್ಲಾ ಯೂಟ್ಯೂಬ್‍ನಲ್ಲಿ ನೋಡಿಕೊಂಡು, ಅದರಲ್ಲಿ ಇರುವ ಪ್ಲಾನ್ ರೀತಿಯಲ್ಲಿಯೇ ಕಾರನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು ಎಂದು ಪೊಲೀಸರ ಬಳಿ ಕಳ್ಳರು ಹೇಳಿದ್ದಾರೆ.
ಜೊತೆಗೆ ಖತರ್ನಾಕ್ ಗ್ಯಾಂಗ್ ಸಾಕಷ್ಟು ಪ್ರಕರಣಗಳನ್ನು ಇದೇ ರೀತಿ ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ. ಈ ಕಳ್ಳರು ಅದೆಷ್ಟು ಖತರ್ನಾಕ್ ಎಂದರೆ ಯೂಟ್ಯೂಬ್ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿಟ್ಟುಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ.