– ಇನ್ನೋರ್ವನಿಗಾಗಿ ಮುಂದುವರಿದ ಶೋಧ ಕಾರ್ಯ
ಗದಗ: ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳದ ನೀರಲ್ಲಿ ಯುವಕರಿಬ್ಬರು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ನರಗುಂದ (Naragund) ತಾಲೂಕಿನ ಹುಣಸಿಕಟ್ಟಿ (Hunashikatti) ಬಳಿ ನಡೆದಿದೆ.
ಓರ್ವ ಯುವಕನ ಶವ ಪತ್ತೆಯಾಗಿದ್ದು, 25 ವರ್ಷದ ಶಿವಪ್ಪ ಅಶೋಕಪ್ಪ ಅವರಾದಿ ಎಂದು ಗುರುತಿಸಲಾಗಿದೆ. ಹಾಗೂ 26 ವರ್ಷದ ಮಣಿಕಂಠ ಅಶೋಕ ಮಲ್ಲಾಪೂರ ಎಂಬುವವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಇದನ್ನೂ ಓದಿ: ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ ರೈತ – ಮುಳ್ಳು ಕಂಟಿಯಲ್ಲಿ ಶವ ಪತ್ತೆ
ಜಿಲ್ಲೆಯಲ್ಲಿ ಭಾನುವಾರ ಸಾಯಂಕಾಲದಿಂದ ಧಾರಾಕಾರ ಮಳೆ ಸುರಿದಿದೆ. ಮಣಿಕಂಠನ ಹೆಂಡತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸುರಿದ ಮಳೆಯಿಂದಾಗಿ ಹೆಂಡತಿಗೆ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಪತ್ನಿಯನ್ನು ಕರೆತರಲು ತನ್ನ ಗೆಳೆಯ ಶಿವಪ್ಪನನ್ನು ಕರೆದುಕೊಂಡು ಹೋಗಿದ್ದ. ಹುಣಸಿಕಟ್ಟಿಯಿಂದ ನರಗುಂದಕ್ಕೆ ಬೈಕಿನಲ್ಲಿ ಹೊರಟಿದ್ದರು.
ಮಾರ್ಗ ಮಧ್ಯೆ ಒಡ್ಡಿನ ಹಳ್ಳವೊಂದು ತುಂಬಿ ಹರಿಯುತ್ತಿತ್ತು. ನೀರಿನ ರಭಸ ಲೆಕ್ಕಿಸದೇ ಹಳ್ಳ ದಾಟಲು ಮುಂದಾಗಿದ್ದ ವೇಳೆ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಓರ್ವ ಶವವಾಗಿ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸದ್ಯ ಸ್ಥಳಕ್ಕೆ ನರಗುಂದ ಪೋಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಖರ್ಗೆ ಮಾತು ಅಸಹ್ಯಕರ, ವಿಕಸಿತ ಭಾರತ್ ನೋಡುವವರೆಗೂ ಅವರು ಬದುಕಿರಲಿ: ಅಮಿತ್ ಶಾ