ಮೈಸೂರು: ಕೆಆರ್‍ಎಸ್ ಹಿನ್ನೀರು ಪ್ರದೇಶದಲ್ಲಿ ಪಾರ್ಕಿಂಗ್ ಶುಲ್ಕದ ವಸೂಲಿ ನೆಪದಲ್ಲಿ ಎಗ್ಗಿಲ್ಲದೇ ಅಕ್ರಮ ವಸೂಲಿ ದಂಧೆ ನಡೆಯುತ್ತಿದೆ. ವಾಹನಗಳ ಪಾರ್ಕಿಂಗ್ ರದ್ದಾಗಿದ್ದರೂ ವಸೂಲಿ ದಂಧೆ ನಿಂತಿಲ್ಲ.
ಮೈಸೂರು ತಾಲೂಕಿನ ಹಳೆ ಉಂಡುವಾಡಿ ಗ್ರಾಮದ ಬಳಿ ಹೀಗೆ ಹಣ ಸುಲಿಗೆ ನಡೆಯುತ್ತಿದೆ. ಕಾರಿಗೆ 50 ರೂ. ಹಾಗೂ ಸ್ಕೂಟರಿಗೆ 20 ರೂ. ಯನ್ನು ಸ್ಥಳೀಯ ಯುವಕರು ವಸೂಲಿ ಮಾಡುತ್ತಿದ್ದಾರೆ. ಮೈಸೂರು ತಾಲೂಕಿನ ಹಳೆ ಆನಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧಿಕೃತ ರಶೀದಿಗಳನ್ನು ಬಳಕೆ ಮಾಡಿಕೊಂಡು ಯುವಕರು ಕೆ.ಆರ್.ಎಸ್ ಹಿನ್ನೀರಿನ ದ್ವೀಪ ಪ್ರದೇಶಕ್ಕೆ ತೆರಳುವ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದಾರೆ.
Advertisement
ಈ ಬಗ್ಗೆ ಪ್ರಶ್ನೆ ಮಾಡುವ ಪ್ರವಾಸಿಗರ ಮೇಲೆ ದಬ್ಬಾಳಿಕೆ ಕೂಡ ನಡೆಯುತ್ತಿದೆ. ಹಿನ್ನೀರಿನಲ್ಲಿರುವ ದ್ವೀಪ ಪ್ರದೇಶ ಅಸುರಕ್ಷಿತ ಎಂಬ ಕಾರಣಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ಹೀಗೆ ಪಾರ್ಕಿಂಗ್ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಹೀಗೆ ವಸೂಲಿ ನಡೆಯುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ದಂಧೆಯನ್ನು ಬಯಲು ಮಾಡಿದ್ದಾರೆ.