ತುಮಕೂರು: ಪಾವಗಡದಲ್ಲಿ ಮಟ್ಕಾ ದಂಧೆ ಮೀತಿ ಮೀರಿ ಹೋಗಿದ್ದು, ಪೊಲೀಸ್ ಇಲಾಖೆ ಈ ದಂಧೆ ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಇದರಿಂದ ಬೇಸತ್ತ ಯುವ ಪಡೆ ‘ಮಟ್ಕಾ ನಿಲಿಸಿ ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ.
ಈ ಅಭಿಯಾನದಿಂದ ಮುಜುಗರಕ್ಕೊಳಗಾದ ಪಾವಗಡದ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು, ಮಟ್ಕಾ ದಂಧೆ ನಿಯಂತ್ರಣಕ್ಕೆ ಸಜ್ಜಾಗಿದೆ. ಪಾವಗಡ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಮಟ್ಕಾ ದಂಧೆ ನಡೆಸುವ ಬುಕ್ಕಿಗಳನ್ನು ಪ್ರತಿದಿನ ತನ್ನ ವಶಕ್ಕೆ ಪಡೆದುಕೊಂಡು ವಾಪಸ್ ಬಿಡುಗಡೆ ಮಾಡುತ್ತಿದೆ. ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 20 ಕ್ಕೂ ಹೆಚ್ಚು ಮಟ್ಕಾ ದಂಧೆ ನಡೆಸುವವರನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ದಿಗ್ಬಂಧನ ಹಾಕಲಾಗುತ್ತಿದೆ.
Advertisement
ಠಾಣೆ ಎದುರು ಎಲ್ಲರನ್ನು ಕೂರಿಸಲಾಗಿದ್ದು, ದಂಧೆಕೋರರು ಎಲ್ಲೂ ಹೋಗದೇ ಪೊಲೀಸ್ ಕಾವಲು ಹಾಕಲಾಗಿದೆ. ಕಳೆದ ಒಂದು ವಾರದಿಂದ ಪಾವಗಡ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಈ ನಡುವೆ ಮಟ್ಕಾ ದಂಧೆಯಲ್ಲಿ ಶಾಮಿಲಾಗಿದ್ದರು ಎಂಬ ಆರೋಪದ ಮೇಲೆ ಸಿಪಿಐ ಮಹೇಶ್‍ನನ್ನು ಅಮಾನತುಗೊಳಿಸಲಾಗಿದೆ. ಇದರ ಪರಿಣಾಮ ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆ ನಿಯಂತ್ರಣವಾಗಿದೆ.
Advertisement
ಆದರೂ ಮಟ್ಕಾ ದಂಧೆಯ ಪ್ರಮುಖ ರೂವಾರಿಗಳಾದ ಅಶ್ವಥ್, ರಾಮಾಂಜಿ, ನೂರಿ ತಲೆ ಮರೆಸಿಕೊಂಡಿದ್ದು, ಅವರನ್ನೂ ಬಂಧಿಸಬೇಕು ಎಂದು ಪೊಲೀಸರ ಮೇಲೆ ಸಾರ್ವಜನಿಕರ ಒತ್ತಡವನ್ನು ಹೇರಿದ್ದಾರೆ.