ಬೆಂಗ್ಳೂರಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು

Public TV
1 Min Read
bakery 1 copy

ಬೆಂಗಳೂರು: ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಅನ್ನು ಯುವಕರು ಮುಚ್ಚಿಸಿದ್ದಾರೆ.

ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಈ ಬೇಕರಿ ಇದೆ. ಈ ಬೇಕರಿಯ ಹೆಸರು ಕರಾಚಿ ಆಗಿದ್ದು, ಈ ಹೆಸರನ್ನು ತೆಗೆಯುವಂತೆ ಯುವಕರು ಗಲಾಟೆ ಮಾಡಿದ್ದಾರೆ.

ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ನಗರದ ಹೆಸರಲ್ಲಿ ಇಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ. ಇದು ನಮಗೆ ಇಷ್ಟವಾಗುತ್ತಿಲ್ಲ. ನೀವು ವ್ಯಾಪಾರ ಬೇಕಾದರೆ ಮಾಡಿಕೊಳ್ಳಿ. ಆದರೆ ಕರಾಚಿ ಹೆಸರು ತೆಗೆಯಿರಿ ಎಂದು ಯುವಕರ ಗಲಾಟೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಮಾಲೀಕ ಖಾನ್ ಚೆಂದ್ ರಾಮಾನಿ ಯುವಕರ ಮಾತಿನಂತೆ ಕರಾಚಿ ಹೆಸರಿಗೆ ಪ್ಲೆಕ್ಸ್ ಕಟ್ಟಿ ಮುಚ್ಚಿದ್ದಾರೆ.

bakery 2 copy

1953ರಲ್ಲಿ ಈ ಬೇಕರಿ ಸ್ಥಾಪನೆಯಾಗಿದ್ದು, ಪಾಕಿಸ್ತಾನದ ರಾಜಧಾನಿ ಕರಾಚಿ ಹೆಸರಿನಲ್ಲಿ ಬೇಕರಿಯನ್ನು ನಡೆಸಲಾಗುತ್ತಿದೆ. ಇದೇ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಬೇಕರಿ ನಡೆಯುತ್ತಿದೆ. ಅಲ್ಲದೆ ಇಂದಿರಾನಗರ ಪೊಲೀಸರು ಬೇಕರಿಯಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಬೇರೆಯಾದ ವೇಳೆ ಖಾನ್ ಚೆಂದ್ ರಾಮಾನಿ ಪಾಕಿಸ್ತಾನದಿಂದ ಹೈದರಾಬಾದ್‍ಗೆ ಬಂದು ನೆಲೆಸಿದ್ದರು. ಹೈದರಾಬಾದ್‍ನಲ್ಲಿ ಮೊದಲ ಬಾರಿಗೆ ಕರಾಚಿ ಬೇಕರಿ ಓಪನ್ ಮಾಡಿದ್ದಾರೆ. ಬಳಿಕ ಬೆಂಗಳೂರಿನ ಇಂದಿರಾ ನಗರ ಮತ್ತು ಮಹದೇವಪುರದಲ್ಲಿ ಬೇಕರಿ ಓಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಆಗ್ರಾ ಸೇರಿದಂತೆ ಹತ್ತಾರು ಬ್ರಾಂಚ್ ಗಳನ್ನು ಹೊಂದಿದ್ದಾರೆ.

ಈ ಸಂಬಂಧ ಬೇಕರಿ ಮಾಲೀಕ ಖಾನ್ ಚೆಂದ್ ರಾಮಾನಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಯುವಕರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *