ಉಡುಪಿ: ಹಲವಾರು ವಿಚಾರದಲ್ಲಿ ಹರಕೆ ಹೊತ್ತು ಕೃಷ್ಣಮಠದಲ್ಲಿ ಭಕ್ತರು ಉತ್ಸವ ಮಾಡಿಸುತ್ತಾರೆ. ಮನಸ್ಸಿನಲ್ಲಿ ಅಂದುಕೊಂಡಿದ್ದು ನೆರವೇರಿದರೆ ಮಠಕ್ಕೆ ಬಂದು ರಥೋತ್ಸವ ನೆರವೇರಿಸುತ್ತಾರೆ. ಉಡುಪಿಯಲ್ಲಿ ಬೇರೆಯದ್ದೇ ಒಂದು ಕಾರಣಕ್ಕೆ ಬ್ರಹ್ಮ ರಥೋತ್ಸವದ ಹರಕೆ ನಡೆದಿದೆ. ಹರಕೆ ಹೊರಲು ಕಾರಣ ಕೇಳಿದ್ರೆ ನೀವು ಅಚ್ಚರಿಪಡುತ್ತೀರಿ.
ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ರಥೋತ್ಸವ ಸಂಭ್ರಮ. ಜೈಕಾರ ಹಾಕುತ್ತಾ ಬ್ರಹ್ಮರಥ ಎಳೆದ ಯುವಕರು. ಈ ಬ್ರಹ್ಮರಥದ ಉತ್ಸವಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ದೆಹಲಿಯಲ್ಲಿರುವ ಪ್ರಧಾನಿಗೂ ಉಡುಪಿಯಲ್ಲಿರುವ ಕೃಷ್ಣ ಮುಖ್ಯಪ್ರಾಣನ ಉತ್ಸವಕ್ಕೂ ಏನು ಸಂಬಂಧ ಅಂತ ತಲೆಕೆಡಿಸಿಕೊಳ್ಳಬೇಡಿ. ಸಂಬಂಧ ಇದೆ. ಉಡುಪಿಯ ಸುಮಾರು 10 ಮಂದಿ ಪ್ರಧಾನಿ ಮೋದಿ ಅಭಿಮಾನಿಗಳು ಉಡುಪಿಯಲ್ಲಿ ಬ್ರಹ್ಮರಥೋತ್ವವದ ಹರಕೆ ಹೊತ್ತಿದ್ದಾರೆ. ಪ್ರಧಾನಿ ಮೋದಿ ಮುಂದಿನ ಅವಧಿಗೂ ಪ್ರಧಾನಿಯಾಗಲಿ ಎಂದು ಈ ಹರಕೆ ಹೊತ್ತಿದ್ದಾರೆ. ಅದರಂತೆ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಸೇವೆ ನೀಡಿದ್ದಾರೆ.
Advertisement
Advertisement
ಮೋದಿ ತನಗಾಗಿ ಅಥವಾ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿಯುತ್ತಿಲ್ಲ. ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ಮತ್ತೆ ಪ್ರಧಾನಿಯಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ಈ ಕಾರಣಕ್ಕಾಗಿ ನಮ್ಮದೊಂದು ಪುಟ್ಟ ಸೇವೆ. ಭಗವಂತನ ಆಶೀರ್ವಾದ ಅವರ ಮೇಲಿರಲಿ ಎಂಬ ಕಾರಣಕ್ಕೆ ಬ್ರಹ್ಮರಥೋತ್ಸವ ಸೇವೆ ನೀಡಿದ್ದೇವೆ ಎಂದು ಹರಕೆ ಹೊತ್ತ ತಂಡದ ಸದಸ್ಯ ಅನಿರುದ್ಧ್ ಐತಾಳ್ ಹೇಳಿದರು.
Advertisement
Advertisement
ಸುಮಾರು 10 ಯುವಕರು ಬ್ರಹ್ಮರಥೋತ್ಸವ ಸೇವೆಯನ್ನು ಕೃಷ್ಣಮಠದಲ್ಲಿ ಬುಕ್ ಮಾಡಿಸಿದ್ದಾರೆ. ಕಾಕತಾಳೀಯ ಎಂಬಂತೆ ಮಧ್ಯಂತರ ಬಜೆಟ್ ದಿನವೇ ಹರಕೆ ತೀರಿಸುವ ಇವರಿಗೆ ಅವಕಾಶ ಸಿಕ್ಕಿದೆ. ಬ್ರಹ್ಮರಥೋತ್ಸವದಲ್ಲಿ ಕೃಷ್ಣಮಠದ ಪರ್ಯಾಯ ಪಲಿಮಾರು ಸ್ವಾಮೀಜಿ, ಅದಮಾರು ಸ್ವಾಮೀಜಿ ಕೂಡಾ ಪಾಲ್ಗೊಂಡರು. ರಥಬೀದಿಯಲ್ಲಿ ದೇಸಿ ಪಟಾಕಿ ಸೇವೆ ಕೂಡಾ ನೆರವೇರಿತು. ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಅಂತ ಪ್ರಾರ್ಥಿಸಲಾಯ್ತು.
ಕೇವಲ ಉಡುಪಿಯ ಯುವಕರ ಕನಸಲ್ಲ ಇದು. ಇಡೀ ದೇಶದ ಯುವ ಪೀಳಿಗೆ ಇಂತಹ ಕನಸು ಕಾಣುತ್ತಿದೆ. ಪಾರದರ್ಶಕ ಮತ್ತು ಪಕ್ಷಪಾತವಿಲ್ಲದ ಆಡಳಿತದ ಅಪೇಕ್ಷೆಯನ್ನು ದೇಶದ ಜನ ಮಾಡುತ್ತಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದೆ ಎಂಬ ಭಾವನೆ ಜನರಲ್ಲಿದೆ ಎಂದು ಕೃಷ್ಣಮಠದ ಭಕ್ತ ವಾಸುದೇವ ಭಟ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು. ಪ್ರಧಾನಿ ಮೋದಿಗಾಗಿ ಬ್ರಹ್ಮರಥೋತ್ಸವ ನಡೆಯುತ್ತಿರುವ ವಿಷಯ ತಿಳಿದ ವಿದೇಶಿ ಪ್ರವಾಸಿಗರು ಕೂಡಾ ಉತ್ಸವದಲ್ಲಿ ಪಾಲ್ಗೊಂಡರು. ತಮ್ಮದೇ ಶೈಲಿಯಲ್ಲಿ ರಥದ ಮುಂದೆ ಸಂಭ್ರಮಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv