ಹೈದರಾಬಾದ್: ಯುವಕರ ಲೈಂಗಿಕ ಕಿರುಕುಳ ತಾಳಲಾರದೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತೆಲಂಗಾಣದ ಹನ್ಮಕೊಂಡದಲ್ಲಿ ನಡೆದಿದೆ.
ಬಾಲಕಿ ಹನ್ಮಕೊಂಡದ ಸಮ್ಮಯ್ಯ ನಗರ ನಿವಾಸಿಯಾಗಿದ್ದು, 9ನೇ ತರಗತಿ ಓದುತ್ತಿದ್ದಳು. ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಸ್ಥಳೀಯ ಯುವಕರು ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾಳೆ.
ಸ್ಥಳೀಯ ಯುವಕರು ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಲೈಂಗಿಕ ಕಿರುಕುಳ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದರು. ಯುವಕರ ಕಿರುಕುಳ ಹಾಗೂ ಅವಮಾನವನ್ನು ಸಹಿಸಲಾಗದೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ವಿಷಯ ತಿಳಿದ ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಾರಂಗಲ್‍ನ ಎಂಜಿಎಂ ಆಸ್ಪತ್ರೆ ರವಾನಿಸಲಾಗಿದೆ. ಅಲ್ಲದೆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅತ್ಯಾಚಾರಕ್ಕೆ ಒಳಗಾಗಿದ್ದಾಳಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳ ನೀಡಿದ ಯುವಕರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.