ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ರಾತ್ರಿ ಗಲಭೆ ಸಂಭವಿಸಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನಗರದ ಖಡಕಗಲ್ಲಿ, ಖಂಜರಗಲ್ಲಿ, ಶಾಸ್ತ್ರಿ ಚೌಕ ಸುತ್ತಮುತ್ತ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.
ಗಲಾಟೆಯಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ಹಾಗೂ ಬಾಟಲ್ ತೂರಾಟ ನಡೆಸಲಾಗಿದೆ. ಅಲ್ಲದೇ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಸುಮಾರು 4 ಬೈಕ್, 1 ಕಾರು, 1 ಆಟೋ ಬೆಂಕಿಗೆ ಆಹುತಿಯಾಗಿದ್ದು, ಅನೇಕ ವಾಹನಗಳು ಜಖಂ ಆಗಿವೆ.
Advertisement
Advertisement
ಎರಡು ಗುಂಪುಗಳ ನಡುವೆ ತೀವ್ರ ಕಲ್ಲು ತೂರಾಟ ನಡೆದ್ದರಿಂದ ರಸ್ತೆ ತುಂಬ ಕಲ್ಲು, ಗಾಜಿನ ಚುರುಗಳು ಬಿದ್ದಿವೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ್, ಡಿಸಿಪಿ ಅಮರನಾಥರೆಡ್ಡಿ ಹಾಗೂ ಮಾರ್ಕೆಟ್ ಎಸಿಪಿ ಶಂಕರ ಮಾರಿಹಾಳ ಅವರಿಗೂ ಘಟನೆಯಲ್ಲಿ ಗಾಯವಾಗಿದೆ. ಶಂಕರ ಮಾರಿಹಾಳರಿಗೆ ಸೇರಿದ ಪೊಲೀಸ್ ವಾಹನ ಸಂಪೂರ್ಣ ಜಖಂ ಆಗಿದೆ.
Advertisement
Advertisement
ಪರಿಸ್ಥಿತಿಯನ್ನು ನಿಯಂತ್ರಿಸಿ ಸ್ಥಳದಲ್ಲಿ ಶಾಂತಿ ಕಾಪಾಡಲು ಕೆ ಎಸ್ ಆರ್ ಪಿ ತುಕಡಿ ಹಾಗೂ ನಗರದ ವಿವಿಧ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗಲಭೆ ಸಂಭವಿಸಿದ ಸಂದರ್ಭದಲ್ಲಿ ದುಷ್ಕರ್ಮಿಗಳು ಪಟಾಕಿ ಸಿಡಿಸಿದ್ದು, ಅಶ್ರುವಾಯು ಪ್ರಯೋಗ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಘಟನೆಯಲ್ಲಿ ಗಲಭೆ ಮಾಡಿದ ವ್ಯಕ್ತಿಗಳ ವಿಡಿಯೋ ಲಭ್ಯವಾಗಿದ್ದು, ಘಟನೆ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಗಲಭೆಗೆ ಸ್ಪಷ್ಟಕಾರಣ ಏನು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡಿಸಿಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.