ಉಡುಪಿ: ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ನಾಲ್ಕೈದು ಜನ ಕೈಯಲ್ಲಿ ಹಿಡಿದು ಬಾಯಿಯನ್ನು ಮುಚ್ಚಿ ಪೋಸು ಕೊಟ್ಟು ಎಲ್ಲರ ಟೀಕೆಗೆ ಒಳಗಾಗಿದ್ದಾರೆ.
ಕುಂದಾಪುರ ತಾಲೂಕಿನ ಇಡೂರು ಕುಜ್ಞಾಡಿ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಸ್ಥಳೀಯ ಗೋಪಾಲ ಅವರ ಮನೆಯಲ್ಲಿ ತಡರಾತ್ರಿ ಬಂದಿದ್ದ ಕಾಳಿಂಗ ಸರ್ಪ ಮನೆ ಮಂದಿಯಲ್ಲಿ ಭಯ ಹುಟ್ಟಿಸಿತ್ತು. ಸ್ಥಳೀಯರಿಗೆ ವಿಷಯ ತಿಳಿದು ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿದ್ದ ಶಂಕರ ಪೂಜಾರಿಯನ್ನು ಕರೆಸಿದ್ದಾರೆ.
ಕೆಲ ಯುವಕರ ಜೊತೆ ಬಂದ ಶಂಕರ ಪೂಜಾರಿ ಹಾವು ಹಿಡಿಯಲು ಇಳಿದಿದ್ದಾರೆ. ಬಿಲದೊಳಗೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಧೈರ್ಯದಿಂದ ಹಿಡಿದಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ತಾವು ಹಿಡಿದ ಈ ಭಾರೀ ಗಾತ್ರದ ವಿಷಕಾರಿ ಸರ್ಪವನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡಿದ್ದಾರೆ. ಮನೆಯವರ ಪ್ರಶಂಸೆಗೂ ಪಾತ್ರವಾಗಿದ್ದಾರೆ.
ಆದರೆ ಹೆಬ್ಬಾವನ್ನು ಹಿಡಿಯುವಂತೆ ವಿಷಕಾರಿ ಕಾಳಿಂಗ ಸರ್ಪವನ್ನು ಹಿಡಿದು ಶಂಕರ ಪೂಜಾರಿ ಮತ್ತು ಗೆಳೆಯರು ಸಾವಿನ ಜೊತೆ ಸರಸವಾಡಿದ್ದಾರೆ ಎಂದು ಗ್ರಾಮದ ಹಿರಿಯರು ಆತಂಕಗೊಂಡಿದ್ದಾರೆ. ಕಾಳಿಂಗ ಕೆರಳಿದರೆ ದೊಡ್ಡ ಅನಾಹುತವಾಗುತ್ತಿತ್ತು. ಸರ್ಪದ ಜೊತೆ ಸರಸ ಮಾಡಬಾರದು ಎಂದು ಗ್ರಾಮಸ್ಥರು, ಅರಣ್ಯಾಧಿಕಾರಿಗಳು ಬುದ್ಧಿಮಾತು ಹೇಳಿದ್ದಾರೆ.
ವಲಯ ಅರಣ್ಯಾಧಿಕಾರಿಗಳು ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಟ್ಟಿದ್ದಾರೆ. ಮುಂದೆ ಈ ರೀತಿ ಪ್ರಯೋಗ ಮಾಡದಿರಿ ಎಂದು ಕಿವಿಮಾತು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv