ಉಡುಪಿ: ಅಪರಿಚಿತರು ಬಂದ್ರೆ ಎಚ್ಚರಿಸೋದಕ್ಕೆ ನಾಯಿಗಳನ್ನ ಮನೆಗಳಲ್ಲಿ ಸಾಕ್ತೇವೆ. ಇನ್ನು ಕೆಲವರು ಮಕ್ಕಳ ಖುಷಿಗಾಗಿ ನಾಯಿಗಳನ್ನು ಸಾಕುತ್ತಾರೆ. ಅದ್ರೆ ಕೆನಡಾದಲ್ಲಿ ಈ ನಾಯಿಗಳನ್ನು ರಕ್ಷಣೆಗಾಗಿ ಸಾಕಲಾಗುತ್ತಿದೆ. ಆ ಬ್ರೀಡನ್ನು ಕರ್ನಾಟಕದಲ್ಲಿ ಬೆಳೆಸೋ ಉದ್ದೇಶದಿಂದ ಇಬ್ಬರು ಸ್ನೇಹಿತರು ಉಡುಪಿಗೆ ಕೆನಡಾದ ನಾಯಿಗಳನ್ನ ತಂದಿದ್ದಾರೆ.
ನ್ಯೂ ಫೌಂಡ್‍ಲ್ಯಾಂಡ್ ಎಂಬ ಜಾತಿಯ ನಾಯಿಯನ್ನು ಇದನ್ನ ಬರೀ ಮನೆ ಕಾಯೋದಕ್ಕೆ ಕೆನಡಾದ ಜನ ಬಳಸುತ್ತಿಲ್ಲ. ಮಕ್ಕಳ ಲಾಲನೆ ಪಾಲನೆ ಜೊತೆ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕೋಸ್ಟ್ ಗಾರ್ಡ್‍ನ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆಗೂ ಉಪಯೋಗ ಮಾಡ್ತಾರೆ. ಇದೀಗ ಕೆನಡಾದಿಂದ ಈ ಬ್ರೀಡ್ ಉಡುಪಿಗೆ ಬಂದಿದೆ. ಸಂತೆಕಟ್ಟೆ ನಿವಾಸಿ ಆಲ್ಫ್ರೆಡ್ ನಾಲ್ಕು ನಾಯಿಗಳನ್ನು ಕೊಂಡು ತಂದಿದ್ದಾರೆ.
ನೋಡೋದಕ್ಕೆ ತುಂಬಾ ಚಂದದ ನಾಯಿ ಇದು. ದೇಹದ ತುಂಬೆಲ್ಲಾ ರೋಮ ಇರೋದ್ರಿಂದ ಎಲ್ಲರಿಗೂ ಇಷ್ಟ ಆಗ್ತದೆ. ಸದ್ಯ ಈ ನಾಯಿಗಳಿಗೆ ರಾಯಲ್ ಕೆನಲ್ ಆಹಾರ ನೀಡುತ್ತಿದ್ದಾರೆ. ದೊಡ್ಡದಾದ ಮೇಲೆ ಚಿಕನ್, ಬಿರಿಯಾನಿ, ಮೊಸರನ್ನ ಮತ್ತು ಮೀನು ಕೊಡುತ್ತಾರೆ. ದೊಡ್ಡ ತಲೆಯ ನಾಯಿ ಇದಾಗಿದ್ದು, ಮುಂದೆ ಬೆಳವಣಿಗೆ ಆದ್ಮೇಲೆ 100 ಕೆಜಿ ತೂಗುತ್ತದೆ. ರಕ್ಷಣೆಗಾಗಿ ಕೆನಡಾದಲ್ಲಿ ಈ ಬ್ರೀಡನ್ನು ಉಪಯೋಗ ಮಾಡ್ತಾರೆ. ಇಂಟರ್ ನೆಟ್‍ನಲ್ಲಿ ನೋಡಿ ಖರೀದಿ ಮಾಡಿದ್ದೇವೆ ಎಂದು ನಾಯಿಯ ಮಾಲೀಕ ಆಲ್ಫ್ರೆಡ್ ಪಬ್ಲಿಕ್ ಟಿವಿಗೆ ಹೇಳಿದರು.
10 ಅಡಿಯಷ್ಟು ಎತ್ತರ ಬೆಳೆಯೋ ಈ ನಾಯಿ ಸುಮಾರು ನೂರು ಕೆಜಿಯವರೆಗೆ ತೂಗುತ್ತದೆ. ಸ್ವಿಮ್ಮಿಂಗ್ ಎಕ್ಸ್‍ಪರ್ಟ್ ಅಂತ ಹೆಸರು ಗಳಿಸಿರೋ ನ್ಯೂ ಫೌಂಡ್‍ಲ್ಯಾಂಡ್ ಬ್ರೀಡ್‍ನ ಒಂದೂವರೆ ತಿಂಗಳ ಮರಿನಾಯಿ 10 ರಿಂದ 12 ವರ್ಷ ಬದುಕುತ್ತದೆ. ಒಂದು ಲಕ್ಷ ರೂಪಾಯಿ ಕೊಟ್ಟು ಈ ಬ್ರೀಡ್ ನ ಮರಿಯನ್ನ ಖರೀದಿ ಮಾಡಲಾಗಿದೆ. ಬಿಸಿಯ ವಾತಾವರಣಕ್ಕೆ ಸುಸ್ತಾಗುವ ಈ ನಾಯಿಮರಿಗಳಿಗೆ ಎಸಿ, ಫ್ಯಾನ್, ಸ್ವಿಮ್ಮಿಂಗ್ ಅತ್ಯಗತ್ಯ. ತಿಂಗಳಿಗೆ 5 ರಿಂದ 15 ಸಾವಿರ ರೂಪಾಯಿಯವರೆಗೆ ಸಾಕಲು ಖರ್ಚಾಗುತ್ತದೆ.
ಇಗ್ಲೆಂಡ್‍ನಲ್ಲಿ ಈ ಬ್ರೀಡನ್ನ ಸಾಕುತ್ತಾರೆ. ನನ್ನ ಗೆಳೆಯ ಕಂಪ್ಲೀಟ್ ಬ್ಲ್ಯಾಕ್ ಕಲ್ಲರ್ ಪಪ್ಪಿ ಖರೀದಿ ಮಾಡಿದ್ದಾನೆ. ನಾನು ಲೈಟ್ ಬ್ರೌನಿಶ್ ತೆಗೆದುಕೊಂಡಿದ್ದೇನೆ. ಇಲ್ಲಿನ ವೆದರ್ ತುಂಬಾ ಬಿಸಿ. ಅದಕ್ಕೆ ತಂಪಾದ ವಾತಾವರಣ ಬೇಕು. ಐಸ್‍ನ್ನು ಟಬ್‍ನಲ್ಲಿ ಹಾಕಿಟ್ರೆ ಅದರ ಜೊತೆ ಆಟಾಡುತ್ತೆ. ಬಹಳ ಇಷ್ಟಪಟ್ಟು ಈ ಬ್ರೀಡನ್ನು ಖರೀದಿ ಮಾಡಿರೋದಾಗಿ ಸಂತೆಕಟ್ಟೆಯ ನಿವಾಸಿ ರಂಜಿತ್ ಹೇಳುತ್ತಾರೆ.
ಕರಾವಳಿ ಕಾವಲು ಪಡೆ ಪೊಲೀಸರು ಈ ಬ್ರೀಡ್‍ನ ನಾಯಿಯನ್ನು ಸಾಕಿದ್ರೆ ಸಮುದ್ರದ ಗಸ್ತಿನ ಸಂದರ್ಭ ಉಪಯೋಗಕ್ಕೆ ಬರುತ್ತಂತೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿದ್ರೆ ಸೆಕ್ಯೂರಿಟಿಗಾಗಿ ನ್ಯೂಫೌಂಡ್ ಲ್ಯಾಂಡ್ ಬಹಳ ಉಪಕಾರಿಯಾಗಬಹುದು.