ಮಂಗಳೂರು: ಚುನಾವಣೆಗೆ ಮುನ್ನ ಹೊತ್ತಿ ಉರಿದಿದ್ದ ದಕ್ಷಿಣ ಕನ್ನಡದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ. ವಿಟ್ಲದ ಕನ್ಯಾನದಲ್ಲಿ ತಡರಾತ್ರಿ ಯುವಕನನ್ನ ಅಟ್ಟಾಡಿಸಿಕೊಂಡು ರಾಡ್ ನಿಂದ ಬಡಿದು ಕೊಲೆ ಮಾಡುವ ಯತ್ನ ನಡೆದಿದೆ.
ಮಿತ್ತನಡ್ಕದ 23 ವರ್ಷದ ನವಾಫ್ ಎಂಬ ಯುವಕನನ್ನ ಅಟ್ಟಾಡಿಸಿ ಕೊಲೆ ಮಾಡುವ ಯತ್ನ ನಡೆದಿದೆ. ವಿಟ್ಲದ ಕನ್ಯಾನದ ಕೆಳಗಿನ ಪೇಟೆಯಲ್ಲಿ ಈ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಕನ್ಯಾನದ ಕುಖ್ಯಾತ ಕ್ರಿಮಿನಲ್ ಹಾಗೂ ಕೇರಳ ಮೂಲದ ಇಬ್ಬರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
ನವಾಫ್ ತಡರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಕನ್ಯಾನದ ಇಕ್ಕು ಯಾನೆ ಇಕ್ಬಾಲ್, ಹರೀಶ್ ಹಾಗೂ ಕೇರಳದ ಇಬ್ಬರು ಸೇರಿಕೊಂಡು ಆಲ್ಟೋ 800 ಕಾರಿನಲ್ಲಿ ಮಾರಕಾಸ್ತ್ರಗಳ ಸಮೇತ ಬಂದಿದ್ದಾರೆ. ನಂತರ ಏಕಾಏಕಿ ಮಾರಕಾಸ್ತ್ರಗಳಿಂದ ನವಾಫ್ ಮೇಲೆ ಹಲ್ಲೆ ನಡೆಸಿದ್ದಾರೆ. ಅದೃಷ್ಯವಶಾತ್ ನವಾಫ್ ಪಾರಾಗಿದ್ದು, ಸ್ಥಳೀಯರು ಅವನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಸದ್ಯಕ್ಕೆ ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ. ಇನ್ನು ಇವರೆಲ್ಲರೂ ಒಂದೇ ಸಮುದಾಯದವರಾಗಿದ್ದು, ಹಳೆಯ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರು ಮತ್ತು ಹಲ್ಲೆಗೊಳಗಾದವನು ಕೂಡ ಕ್ರಮಿನಲ್ ಗಳಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv