ಕಾರವಾರ: ಜಿಲ್ಲೆಯ ಕಾಳಿ ನದಿಯಿಂದಾಗಿ ಉಮ್ಮಳೆಜೂಗ ಗ್ರಾಮದ ಯುವಕರಿಗೆ ಯುವತಿಯರೇ ಸಿಗುತ್ತಿಲ್ಲ. ಹೀಗಾಗಿ ಮದುವೆ ಆಸೆಗೆ ತಣ್ಣೀರು ಬಿದ್ದಿದ್ದು, ಯುವಕರು ವಲಸೆ ಹೋಗುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ ಕೇವಲ 20 ಕಿ.ಮೀ. ದೂರದ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮ್ಮಳೆಜೂಗ. ಈ ಭಾಗದ ಯುವಕರ ಮದುವೆ ಆಸೆಗೆ ಕಾಳಿ ನದಿ ತಣ್ಣೀರು ಎರಚುತ್ತಾಳೆ. ಮಳೆಗಾಲ ಪ್ರಾರಂಭವಾಯ್ತು ಅಂದರೆ ಈ ಗ್ರಾಮದ ಸುತ್ತಲೂ ಕಾಳಿ ನದಿ ನೀರು ತುಂಬಿ ಹರಿಯುತಿಯುತ್ತಾಳೆ. ದ್ವೀಪ ಪ್ರದೇಶವಾಗಿದ್ದರಿಂದ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು. ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 250 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು ವ್ಯವಸಾಯವನ್ನು ನಂಬಿ ಬದುಕುತ್ತಿದ್ದಾರೆ.
Advertisement
Advertisement
ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮವನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಊರಿನಲ್ಲಿ ನೆಂಟರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ.
Advertisement
Advertisement
ಈ ಭಾಗದ ಜನರು ಭತ್ತ, ತೆಂಗು, ಬಾಳೆ ಫಸಲನ್ನು ಬೆಳೆಸುತ್ತಾರೆ. ಆದರೆ ಇವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ತೆಗೆದುಕೊಂಡು ಹೋಗಬೇಕು. ಹೀಗಾಗಿ ಹಲವರು ವ್ಯವಸಾಯ ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೂಗಿ ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ.
ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಜನರು ಕಾಯಬೇಕು. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.