Bengaluru City
ಪ್ರಿಯತಮೆ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪ್ರೇಮಿ!

ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದಾಕೆಯ ಮೇಲೆಯೇ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಆರೋಪಿ ಪ್ರಿಯತಮನನ್ನು ವಶಕ್ಕೆ ಪಡೆದಿದ್ದಾರೆ.
ಜಮಾದ್ ಪಾಷಾ (22) ಬಂಧಿತ ಆರೋಪಿಯಾಗಿದ್ದು, ಈತ ನಾಯಂಡಹಳ್ಳಿ ನಿವಾಸಿಯಾಗಿದ್ದಾನೆ. ಜಮಾದ್ ಪಾಷಾ ಯುವತಿಗೆ ಪರಿಚಯಸ್ಥನಾಗಿದ್ದ. ಈತ ಯುವತಿಗೆ ಪ್ರೀತಿಸುವಂತೆ ಕಾಡುತ್ತಿದ್ದ. ಆದ್ರೆ ಪ್ರೀತಿಸಲು ಯುವತಿ ಒಲ್ಲೆ ಎಂದಿದ್ದಾಳೆ. ಇದರಿಂದ ಸಿಟ್ಟುಗೊಂಡ ಪಾಷಾ ಆಕೆಯ ಮನೆಗೆ ನುಗ್ಗಿ ಸೀಮೆ ಎಣ್ಣೆ ಸುರಿದು ಬೆಂಕಿಯಿಟ್ಟು ಹತ್ಯೆಗೈಯಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಬಂದು ಯುವತಿಯನ್ನು ರಕ್ಷಿಸಿದ್ದಾರೆ.
ಘಟನೆಯಿಂದ ಯುವತಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
