ಬೆಂಗಳೂರು: ಐದು ವರ್ಷ ಪ್ರೀತಿ ಮಾಡಿದ ಗೆಳತಿ ದಿಢೀರನೇ ಮೆಸಜ್ ಮಾಡಿ ಅಪ್ಪ ಅಮ್ಮ ಹೊಡೀತ್ತಿದ್ದಾರೆ. ಮನೆಗೆ ಬೇಗ ಬಾ ಎಂದು ಹೇಳಿದ್ದಳು. ಮೆಸೇಜ್ ನೋಡಿ ಗೆಳತಿಯ ಮನೆಗೆ ಹೋದ ಯುವಕ ಸಾವನ್ನಪ್ಪಿದ್ದಾರೆ.
ನಗರದ ಹೊರವಲಯದ ಅವಲಹಳ್ಳಿ ನಿವಾಸಿ ಮೋಹನ್ ರಾಜ್ ಮೃತ ಯುವಕ. ಮೋಹನ್ ತನ್ನದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಅದರೆ ಇವರಿಬ್ಬರದು ಬೇರೆ ಬೇರೆ ಜಾತಿಯಾಗಿದ್ದರಿಂದ ಇಬ್ಬರ ಮನೆಯಲ್ಲೂ ವಿರೋಧವಿತ್ತು. ಹೀಗಿದ್ರೂ ಇವರಿಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.
ಇದನ್ನೂ ಓದಿ: 5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು
ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಮೋಹನ್‍ಗೆ ಯುವತಿ ಮೊಬೈಲ್ ನಿಂದ ಒಂದು ಮಸೇಜ್ ಬಂದಿತ್ತು. ನನ್ನ ಪೋಷಕರು ಹೊಡೆಯುತ್ತಿದ್ದಾರೆ, ಮನೆಗೆ ಬಾ ಎಂದು ಹೇಳಿದ್ದಳು. ಗಾಬರಿಗೊಂಡ ಮೋಹನ್ ಯುವತಿಯ ಮನೆಗೆ ಹೋಗಿದ್ದರು. ಆದರೆ ಯುವತಿಯ ಮನೆಯ ನಾಲ್ಕನೆಯ ಮಹಡಿಯಿಂದ ಬಿದ್ದಿದ್ದಾರೆ. ಕೂಡಲೇ ಮೋಹನ್‍ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ಸಾವನ್ನಪ್ಪಿದ್ದಾರೆ.
ನಮ್ಮ ಮಗನನ್ನು ಯುವತಿಯ ಮನೆಯವರು ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮೋಹನ್ ತಂದೆ ನಾರಾಯಣ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಮೋಹನ್ ಸಾವಿನ ಸತ್ಯಾಂಶ ತಿಳಿಯಬೇಕಿದೆ.