ಹಾವೇರಿ: ನಗರದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಕ್ರೂರಿಯ ಬಂಧನಕ್ಕೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಇಂದು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ ಮಾತನಾಡಿ, ಮಂಗಳವಾರ ನಗರದಲ್ಲಿ ಯುವತಿಯೋರ್ವಳ ಮೇಲೆ ಆ್ಯಸಿಡ್ ದಾಳಿ ನಡೆದಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಯುವತಿಯ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಆ್ಯಸಿಡ್ ದಾಳಿ ಮಾಡಿರುವ ಕ್ರೂರಿಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಕ್ರೂರಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಬೇಕು. ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಜೊತೆಗೆ ಆಕೆಗೆ ಸರ್ಕಾರ ನೆರವನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಉಡಚಪ್ಪ ಮಾಳಗಿ, ಅಕ್ಷತಾ ಕೆ.ಸಿ, ಅಶೋಕ್ ಮರೆಣ್ಣನವರ, ಸಂಜಯಗಾಂಧಿ ಸಂಜೀವಣ್ಣನವರ ಮತ್ತಿತರರು ಭಾಗಿಯಾಗಿದ್ದರು. ಆ್ಯಸಿಡ್ ದಾಳಿ ಭಯನಾಕವಾಗಿದ್ದು, ಅದರ ಯಾತನೆ ಸಹಿಸುವುದು ಕಷ್ಟ, ಸುಪ್ರೀಂ ಕೋರ್ಟ್ ಆ್ಯಸಿಡ್ ಮಾರಾಟಕ್ಕೆ ನಿರ್ಬಂಧ ಹೇರಿದ್ದರೂ ಅನಿಯಂತ್ರಿತವಾಗಿ ಮಾರಾಟವಾಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ಜರುಗಿಸಬೇಕು. ಆ್ಯಸಿಡ್ ದಾಳಿಯನ್ನು ಗೃಹ ಸಚಿವರು ಗಂಭಿರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲದಲಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಕೂಡ ಭಾಗಿಯಾಗಿದ್ದರು.
ಏನಿದು ಪ್ರಕರಣ?
ಹಾವೇರಿ ನಗರದ ರಾಣೆಬೆನ್ನೂರು ರಸ್ತೆಯಲ್ಲಿ ಮಂಗಳವಾರ ಯುವತಿಯೋರ್ವಳ ಮುಖಕ್ಕೆ ದುಷ್ಕರ್ಮಿಯೊಬ್ಬ ಆ್ಯಡ್ ಎರಚಿ ಪರಾರಿಯಾಗಿದ್ದಾನೆ. ಗಾರ್ಮೆಂಟ್ ಒಂದರಲ್ಲಿ ಸಂತ್ರಸ್ತ ಯುವತಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ದುಷ್ಕರ್ಮಿ ಕೃತ್ಯವೆಸೆಗಿದ್ದಾನೆ.
ಯುವತಿ ಮೇಲೆ ಆ್ಯಸಿಡ್ ಎರಚಿದ ಪರಿಣಾಮ ಆಕೆಯ ಬಲಗೆನ್ನೆಗೆ ಮೇಲೆ ಸುಟ್ಟ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ, ಸ್ಥಳೀಯ ಶಾಸಕ ನೆಹರು ಓಲೇಕಾರ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ. ಹಾವೇರಿ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.