ಬೆಂಗಳೂರು: ರಣಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಇಂತಹ ಪ್ರವಾಹದ ಸ್ಥಿತಿಯಲ್ಲಿ ಬೆಳಗಾವಿಯ ಯುವಕನೊಬ್ಬ ಪ್ರವಾಹಕ್ಕೆ ಸೆಡ್ಡು ಹೊಡೆದು ತನ್ನ ಸಾಧನೆಯನ್ನು ಮಾಡಿದ್ದಾರೆ. ಪ್ರವಾಹಕ್ಕೆ ಸೆಡ್ಡು ಹೊಡೆದು ಯುವಕ ಬೆಳ್ಳಿ ಪದಕ ಗೆದಿದ್ದಾರೆ.
19 ವರ್ಷದ ಯುವಕ ನಿಶಾನ್ ಮೂಲತಃ ಬೆಳಗಾವಿ ಜಿಲ್ಲೆಯ ಮಣ್ಣೂರು ಗ್ರಾಮದವರು. ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಎಂ.ಜಿ ಅಕಾಡೆಮಿ ಫಾರ್ ಸ್ಪೋರ್ಟ್ಸ್ ನಲ್ಲಿ ಬಾಕ್ಸಿಂಗ್ ಟ್ರೈನಿಂಗ್ ಪಡೆಯುತ್ತಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನಲ್ಲಿ ನ್ಯಾಷನಲ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಇತ್ತು. ಆದರೆ ಸ್ವಗ್ರಾಮ ಮಣ್ಣೂರಿನಿಂದ ಬೆಳಗಾವಿಗೆ ಬರುವ ರಸ್ತೆಗಳೆಲ್ಲ ಪ್ರವಾಹದಿಂದ ಜಲಾವೃತಗೊಂಡು ರಸ್ತೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು.
Advertisement
Advertisement
ಇಷ್ಟು ವರ್ಷ ಅಭ್ಯಾಸ ಮಾಡಿದ್ದು, ಮೊದಲ ಬಾರಿಗೆ ನ್ಯಾಷನಲ್ ಲೆವೆಲಿನಲ್ಲಿ ಬಾಕ್ಸಿಂಗ್ ಮಾಡುವ ಅವಕಾಶವನ್ನು ಕಳೆದುಕೊಂಡರೆ ಹೇಗೆ ಎನ್ನುವ ಭಯ ನಿಶಾನ್‍ಗೆ ಶುರುವಾಯಿತು. ಒಂದು ಕ್ಷಣವೂ ಹಿಂದು ಮುಂದು ನೋಡದೆ ನಿಶಾನ್ ಲಗ್ಗೆಜ್ ಸಮೇತ ಪ್ರವಾಹದ ನೀರಿನಲ್ಲೇ ಈಜಿಕೊಂಡು ಬೆಳಗಾವಿ ಸೇರಲು ನಿರ್ಧಾರ ಮಾಡಿದ್ದರು. ನಿಶಾನ್‍ನ ಪರಿಶ್ರಮವನ್ನು ನೋಡಿದ್ದ ತಂದೆ ಮನೋಹರ್ ನಾನು ನಿನ್ನ ಜೊತೆ ಬೆಳಗಾವಿಗೆ ಬರುತ್ತೇನೆ ಎಂದು ಮಗನಿಗೆ ಸಾಥ್ ನೀಡಿದರು.
Advertisement
Advertisement
ಮಣ್ಣೂರಿನಿಂದ ಬೆಳಗಾವಿಗೆ 2.5 ಕಿಮಿ ಅಂತರವಿದ್ದು ಮಳೆಯ ರಣಭೀಕರ ಪ್ರವಾಹದ ನೀರಿನಲ್ಲೇ ಸತತ 45 ನಿಮಿಷ ಈಜಿಕೊಂಡು ಬೆಳಗಾವಿ ತಲುಪಿ ಅಲ್ಲಿಂದ ಬೆಂಗಳೂರಿಗೆ ರೈಲಿನ ಮೂಲಕ ನಿಶಾನ್ ಬಂದಿದ್ದರು. ಪ್ರವಾಹವನ್ನೇ ಲೆಕ್ಕಿಸದ ಛಲಗಾರ ಬಾಕ್ಸರ್ ನಿಶಾನ್ ಲೈಟ್ ಪ್ಲೈ ವೇಟ್ ವಿಭಾಗದಲ್ಲಿ ಫೈನಲ್ ತಲುಪಿ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಭಾರತದ ಪ್ರತಿನಿಧಿಯಾಗಿ ಬಾಕ್ಸಿಂಗ್‍ನಲ್ಲಿ ಹೆಸರು ಮಾಡಬೇಕು ಎನ್ನುವ ಆಸೆ ಇದೆ ಎಂದು ನಿಶಾನ್ ವ್ಯಕ್ತಪಡಿಸಿದ್ದಾರೆ.