ಉಡುಪಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ, ಅಪರಿಚಿತ ಯುವಕನನ್ನು ಉಡುಪಿಯಲ್ಲಿ ರಕ್ಷಣೆ ಮಾಡಲಾಗಿದೆ. ನಗರದ ಕುಕ್ಕಿಕಟ್ಟೆ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಸಲಾಗಿದ್ದು, ಸಂಬಂಧಿಕರ ಬರುವಿಕೆಗಾಗಿ ಸಾಮಾಜಿಕ ಕಾರ್ಯಕರ್ತರು ಕಾಯುತ್ತಿದ್ದಾರೆ.
ಶುಕ್ರವಾರ ಸಂಜೆ ರೈಲು ಸೇತುವೆ ಬಳಿ ಅನುಮಾನಸ್ಪದವಾಗಿ ಸುತ್ತಾಡುತ್ತಿದ್ದ ಯುವಕನನ್ನು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಅವರು ಗಮನಿಸಿದ್ದಾರೆ. ಯುವಕನನ್ನು ವಿಚಾರಿಸಿದಾಗ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ತಕ್ಷಣ ರಾಘವೇಂದ್ರ ಪ್ರಭು ಕರ್ವಾಲು ಅವರು ಯುವಕನ ನಡವಳಿಕೆಯಲ್ಲಿ ಅನುಮಾನಪಟ್ಟು, ಉಡುಪಿಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ವಿಷಯ ಮುಟ್ಟಿಸಿದ್ದಾರೆ.
Advertisement
Advertisement
ಫೋನ್ ಕರೆಗೆ ಸ್ಪಂದಿಸಿದ ಸಮಾಜ ಸೇವಕ ಗೆಳೆಯರು ಯುವಕನನ್ನು ಕುಕ್ಕಿಕಟ್ಟೆ ರೈಲ್ವೆ ಸೇತುವೆ ಬಳಿ ರಕ್ಷಿಸಿದ್ದಾರೆ. ಕೆಲವು ದಿನಗಳಿಂದ ಅನ್ನ ಇಲ್ಲದೆ ಹಸಿದಿರುವ ಯುವಕನಿಗೆ ಆಹಾರದ ವ್ಯವಸ್ಥೆಗೊಳಿಸಿದ್ದಾರೆ. ನಂತರ ಕಟಪಾಡಿಯಲ್ಲಿರುವ ಕಾರುಣ್ಯ ಅನಾಥರ ಆಶ್ರಮದಲ್ಲಿ ನೆಲೆ ಕಲ್ಪಿಸಿದ್ದಾರೆ. ಆಶ್ರಮ ಸಂಚಾಲಕ ಕುಮಾರ್ ಅವರು ಮನನೊಂದ ಯುವಕನಿಗೆ ಆಶ್ರಯ ಒದಗಿಸಿ ಮಾನವಿಯತೆ ಮೆರೆದಿದ್ದಾರೆ.
Advertisement
ಯುವಕ ಮಾನಸಿಕ ಖಿನ್ನತೆಗೆ ಒಳಪಟ್ಟಂತೆ ಕಂಡು ಬಂದಿದ್ದು, ಕೊಂಕಣಿ ಹಾಗೂ ಕನ್ನಡ ಬಾಷೆ ಮಾತನಾಡುತ್ತಾನೆ. ಗೌಡ ಸಾರಸ್ವತ ಸಮಾಜದ ವ್ಯಕ್ತಿ ಎಂದು ಹೇಳಿಕೊಂಡಿದ್ದಾನೆ. ರಾಘವೇಂದ್ರ ಕಾಮತ್ (40) ತಂದೆ ಹನುಮಂತ ಕಾಮತ್, ಪಿ.ಆರ್.ಲೇಔಟ್, ಶೇಷಾದ್ರಿಪುರಂ- ಬೆಂಗಳೂರು ವಿಳಾಸ ಇರುವ ಆಧಾರ್ ಕಾರ್ಡ್ ಯುವಕನಲ್ಲಿ ಇರುವುದು ಕಂಡು ಬಂದಿದೆ.
Advertisement
ಯುವಕನಿಗೆ ಮಾನಸಿಕ ಚಿಕಿತ್ಸೆ ಒದಗಿಸಬೇಕಾಗಿದ್ದು ಸಮಾಜದ ಸಂಘ-ಸಂಸ್ಥೆಗಳು ನೆರವಿಗೆ ಮುಂದೆ ಬರಬೇಕಾಗಿದೆ. ವಾರಸುದಾರರು ತುರ್ತಾಗಿ ಉಡುಪಿ ಕಟಪಾಡಿಯ ಕಾರುಣ್ಯ ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಸಂಬಂಧಿಕರು ಸಮಾಜಸೇವಕ ನಿತ್ಯಾನಂದ ಒಳಕಾಡು- ತಾರನಾಥ ಮೇಸ್ತರನ್ನು ಸಂಪರ್ಕಿಸಬಹುದು.