ಲಕ್ನೋ: ಮೊಬೈಲಿನಲ್ಲಿ ಪಬ್‍ಜಿ ಗೇಮ್ ಆಡುವುದರಲ್ಲಿ ಮಗ್ನನಾಗಿದ್ದ ಯುವಕನೊಬ್ಬ ನೀರು ಎಂದು ಭಾವಿಸಿ ರಾಸಾಯನಿಕವನ್ನು ಕುಡಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಘಟನೆ ಸಂಭವಿಸಿದ್ದು, ಸಾವನ್ನಪ್ಪಿರುವ ಯುವಕನನ್ನು 22 ವರ್ಷದ ಸೌರಭ್ ಯಾದವ್ ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನೀರು ಎಂದುಕೊಂಡು ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ಕುಡಿದು ಮೃತಪಟ್ಟಿದ್ದಾನೆ.
Advertisement
Advertisement
ಈ ಕುರಿತು ಮಾಹಿತಿ ನೀಡಿದ ಆಗ್ರಾ ಕಂಟೋನ್ಮೆಂಟ್ ರೈಲು ನಿಲ್ದಾಣದ ಇನ್ಚಾರ್ಜ್ ವಿಜಯ್ ಸಿಂಗ್, ಆಭರಣಗಳ ಡೀಲರ್ ಆಗಿರುವ ತನ್ನ ಸ್ನೇಹಿತ ಸಂತೋಷ್ ಶರ್ಮಾ ಅವರೊಂದಿಗೆ ಯುವಕ ಸೌರಭ್ ಪ್ರಯಾಣಿಸುತ್ತಿದ್ದ. ಶರ್ಮಾ ಆಭರಣಗಳನ್ನು ಪಾಲಿಶ್ ಮಾಡುವ ರಾಸಾಯನಿಕವನ್ನು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಇವರಿಬ್ಬರೂ ಒಂದೇ ಬ್ಯಾಗನ್ನು ಹೊಂದಿದ್ದರು. ಸಂತೋಷ್ ಆಭರಣಗಳನ್ನು ಪಾಲಿಶ್ ಮಾಡುವ ವ್ಯಾಪಾರಕ್ಕಾಗಿ ಆಗ್ರಾಗೆ ತೆರಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
Advertisement
ವಿಚಾರಣೆ ವೇಳೆ ಸಂತೋಷ್ ಮಾಹಿತಿ ನೀಡಿ, ಪ್ರಯಾಣದ ವೇಳೆ ಸೌರಭ್ ಮೊಬೈಲಿನಲ್ಲಿ ಪಬ್‍ಜಿ ಗೇಮ್ ಆಡುವುದರಲ್ಲಿ ಬ್ಯುಸಿಯಾಗಿದ್ದ, ಈ ವೇಳೆ ಕುಡಿಯಲು ನೀರು ತೆಗೆದುಕೊಳ್ಳಲು ಹೋಗಿದ್ದಾನೆ. ಆದರೆ ತಿಳಿಯದೇ ರಾಸಾಯನಿಕದ ಬಾಟಲ್ ತೆಗೆದುಕೊಂಡಿದ್ದಾನೆ. ಬಾಟಲಿಯನ್ನು ಪರಿಶೀಲಿಸದೇ ನೀರು ಎಂದು ರಾಸಾಯನಿಕವನ್ನೇ ಕುಡಿದಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.
Advertisement
ಅಭರಣಗಳನ್ನು ಸ್ವಚ್ಛಗೊಳಿಸಲು ಹಾಗೂ ಪಾಲಿಶ್ ಮಾಡಲು ಬಳಸುವ ರಾಸಾಯನಿಕವನ್ನು ಸೌರಭ್ ಯಾದವ್ ಕುಡಿದಿದ್ದಾನೆ. ನಂತರ ಸೌರಭ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಮೊರೆನಾ(ಆಗ್ರಾ ಹಾಗೂ ಗ್ವಾಲಿಯರ್ ನಡುವಿನ ನಗರ) ಹತ್ತಿರದಲ್ಲಿ ಕುಸಿದು ಬಿದ್ದಿದ್ದಾನೆ. ರೈಲು ನಿಲ್ದಾಣವನ್ನು ತಲುಪುವಷ್ಟರಲ್ಲಿ ಸೌರಭ್ ಮೃತಪಟ್ಟಿದ್ದಾನೆ. ಪ್ರಕರಣದ ಕುರಿತು ಖಚಿತಪಡಿಸಿಕೊಳ್ಳಲು ಮರಣೋತ್ತರ ಪ್ರರೀಕ್ಷೆಗಾಗಿ ಕಾಯುತ್ತಿದ್ದೇವೆ ಎಂದು ಸಿಂಗ್ ವಿವರಿಸಿದ್ದಾರೆ.