ಬಾಗಲಕೋಟೆ: ಸ್ನೇಹಿತರೊಂದಿಗೆ ಬನಶಂಕರಿ ದೇವಿ ಜಾತ್ರೆಗೆ ಆಗಮಿಸಿದ್ದ ಯುವಕ ಸ್ನಾನ ಮಾಡಲು ಹೋಗಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬದಾಮಿ ಪಟ್ಟಣದಲ್ಲಿ ನಡೆದಿದೆ.
ಶಿವಕುಮಾರ್ ಗರಡ್ಡಿ (24) ಮೃತ ಯುವಕ. ಪಟ್ಟಣದ ಬನಶಂಕರಿ ದೇವಸ್ಥಾನದ ಎದುರಿನಲ್ಲಿರುವ ಹರಿದ್ರಾ ತೀರ್ಥ ಹೊಂಡದಲ್ಲಿ ಈ ಘಟನೆ ನಡೆದಿದೆ. ಮೃತ ಶಿವಕುಮಾರ್ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
Advertisement
Advertisement
ಶಿವಕುಮಾರ್ ಸ್ನೇಹಿತರೊಂದಿಗೆ ಬನಶಂಕರಿ ದೇವಿಯ ಜಾತ್ರೆಗಾಗಿ ಬದಾಮಿಗೆ ಆಗಮಿಸಿದ್ದನು. ಇಂದು ಬೆಳಗ್ಗೆ ಸ್ನಾನ ಮಾಡಲು ಹೊಂಡಕ್ಕೆ ಇಳಿದಿದ್ದ. ಆಗ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಬದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
Advertisement
ಬದಾಮಿ ಪಟ್ಟಣದ ಸುಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಇದೇ 10ರಂದು ಆರಂಭವಾಗಿದೆ. ಒಂದು ತಿಂಗಳ ಕಾಲ ನಡೆಯುವ ದೇವಿಯ ಜಾತ್ರೆಗೆ ರಾಜ್ಯದ ನಾನಾ ಭಾಗದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಜಾತ್ರೆಯಲ್ಲಿ ಸಂಜೆ ನಂತರ ಮನರಂಜನಾ ಕಾರ್ಯಕ್ರಮಗಳು ಇರುತ್ತವೆ. ಹೀಗಾಗಿ ಜಾತ್ರೆಗೆ ಆಗಮಿಸಿದ ಜನರು ನಾಟಕ ನೋಡಿಕೊಂಡು ಎಂಜಾಯ್ ಮಾಡಿ ಹಿಂದಿರುಗುತ್ತಾರೆ.
Advertisement
ಅಲ್ಲದೇ ಬನಶಂಕರಿ ದೇವಿಯ ಮಹಿಮೆ ಅಪಾರ ಇರುವ ಕಾರಣ ದೂರದ ಊರುಗಳಿಂದ ದೇವಿ ದರ್ಶನಕ್ಕೆ ಬರುತ್ತಾರೆ. ಮೊದಲು ಹರಿದ್ರಾ ತೀರ್ಥ ಪುಷ್ಕರಣಿ ಹೊಂಡದಲ್ಲಿ ಮಿಂದೆದ್ದು, ನಂತರ ದರ್ಶನ ಪಡೆಯುವುದು ವಾಡಿಕೆಯಾಗಿದೆ. ಹೀಗಾಗಿ ನಾಲ್ಕೈದು ಸ್ನೇಹಿತರೊಂದಿಗೆ ಬಂದಿದ್ದ ಶಿವಕುಮಾರ್, ದೇವಿ ದರ್ಶನಕ್ಕೂ ಮುಂಚೆ ಪುಷ್ಕರ್ಣಿ ಹೊಂಡದಲ್ಲಿ ಸ್ನಾನಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ಇದರಿಂದ ಭಕ್ತರು ಆತಂಕಗೊಂಡಿದ್ದು, ಸದ್ಯಕ್ಕೆ ಭಕ್ತರಿಗೆ ಹೊಂಡದಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಗಿದೆ. ಶವ ಪತ್ತೆಯ ಕಾರ್ಯಚರಣೆಯ ನಂತರ ಭಕ್ತಾದಿಗಳ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಪೊಲೀಸರು ಹೇಳುತ್ತಿದ್ದಾರೆ.