ಬೆಂಗಳೂರು: ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗೌಡನ ಪಾಳ್ಯದ ಮಂಜುನಾಥ್ ನಗರದಲ್ಲಿ ನಡೆದಿದೆ.
ನವೀನ್ (23) ಅನುಮಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಯುವಕ. ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೀನ್ ಮೂಲತ: ರಾಮನಗರದ ಕನಕಪುರದವನಾಗಿದ್ದು, ಪರ್ನೀಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ ನವೀನ್ ಶನಿವಾರ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದನು. ಬೆಳಗ್ಗೆ ಎದ್ದು ಪಕ್ಕದ ಮನೆಯವರು ನೋಡಿದಾಗ ನವೀನ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆಗ ಅಕ್ಕಪಕ್ಕದವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸುಬ್ರಮಣ್ಯಪುರ ಪೊಲೀಸರು ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಇತ್ತೀಚಿಗೆ ಅಪಘಾತದಲ್ಲಿ ನವೀನ್ ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಗಾಯದ ನೋವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ನವೀನ್ ಪೋಷಕರು ಮಗ ನೇಣು ಹಾಕಿಕೊಂಡು ಸಾವನ್ನಪ್ಪುವಂತವನಲ್ಲ, ತನಿಖೆ ಆಗಬೇಕೆಂದು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.