ಹೊಸ ವರ್ಷದಂದು ಮನೆಯಿಂದ ಹೊರ ಹೋಗಿದ್ದ ಯುವಕ ಸಂಕ್ರಾಂತಿಯಂದು ಶವವಾಗಿ ಪತ್ತೆ

Public TV
2 Min Read
klr youth death

– ಪಾರ್ಟಿ ಮಾಡಿ ಸ್ನೇಹಿತರಿಂದಲೇ ಸುಹಾಸ್ ಕೊಲೆ?
– ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೋಲಾರ: ಹೊಸ ವರ್ಷ ಆಚರಣೆಗಾಗಿ ಜೀವಂತವಾಗಿ ಮನೆಯಿಂದ ಹೊರ ಹೋಗಿದ್ದ ಯುವಕನೊಬ್ಬ ಸಂಕ್ರಾಂತಿ ಹಬ್ಬದಂದು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೋಲಾರ ತಾಲೂಕಿನ ಶಾಪೂರು ಕ್ರಾಸ್‍ನ ಅಬ್ಬಣಿ ಗ್ರಾಮದ ಬಳಿ ನಡೆದಿದೆ.

ಸುಹಾಸ್(19) ಅನುಮಾನಸ್ಪದವಾಗಿ ಮೃತಪಟ್ಟ ಯುವಕ. ಬೇವಿನ ಮರಕ್ಕೆ ನೇಣು ಬಿಗಿದಿದ್ದು, ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ವೇಳೆ ಮೃತದೇಹ ಯಾರದ್ದು ಎಂದು ಹುಡುಕಾಟದಲ್ಲಿದ್ದವರಿಗೆ 15 ದಿನಗಳಿಂದ ಕಾಣೆಯಾಗಿದ್ದ ಸುಹಾಸ್ ನೆನಪಾಗಿದ್ದಾನೆ. ಮೃತದೇಹ ಪತ್ತೆಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸುಹಾಸ್ ಪೋಷಕರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮೊಬೈಲ್ ಹಾಗೂ ಬಟ್ಟೆಯನ್ನು ಗುರುತಿಸಿ ಇವನೇ ಸುಹಾಸ್ ಎಂದು ಗುರುತು ಪತ್ತೆಹಚ್ಚಿದ್ದಾರೆ.

klr youth death e1579157900349
ಸುಹಾಸ್ ತಂದೆ ರವೀಂದ್ರ

ಕಳೆದ 2019 ಡಿಸೆಂಬರ್ 31ರಂದು ಹೊಸ ವರ್ಷ ಹಾಗೂ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಸ್ನೇಹಿತರು ಕೇಕ್ ಕತ್ತರಿಸಲು ಫೋನ್ ಮಾಡುತ್ತಿದ್ದಾರೆ ಎಂದು ಮನೆಯಲ್ಲಿ ಹೇಳಿ ಹೋದ ಸುಹಾಸ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. 15 ದಿನಗಳ ನಂತರ ಅಂದರೆ ಬುಧವಾರ ಮದ್ಯಾಹ್ನ 1 ಗಂಟೆ ಸುಮಾರಿಗೆ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗನದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

Police Jeep 1

ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಪೋಷಕರು, ಆತನ ಮೂವರು ಸ್ನೇಹಿತರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 1ರಂದು ಹೊಸ ವರ್ಷದ ಜೊತೆಗೆ ಸುಹಾಸ್ ಹುಟ್ಟುಹಬ್ಬವಿತ್ತು. ಡಿ.31ರಂದು ರಾತ್ರಿ ಸುಹಾಸ್ ತನ್ನ ತಾಯಿ ಬಳಿ ಹೋಗಿ ಸ್ನೇಹಿತರು ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲಿದ್ದಾರೆ. ಅವರು ನನಗಾಗಿ ಹೊಸ ಬಟ್ಟೆ ತಂದಿದ್ದು, ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಿದ್ದಾರೆ ಎಂದು ಹೇಳಿ ಅಂದು ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದನು. ಹೊಸ ವರ್ಷ ಬಂದರೂ ಮಗ ಮನೆಗೆ ಬಂದಿಲ್ಲ ಎಂದು ಸಂಬಂಧಿಕರು ಸುಹಾಸ್ ಸ್ನೇಹಿತರನ್ನು ವಿಚಾರಣೆ ಮಾಡಿದ್ದರು. ಆದರೆ ಸುಹಾಸ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಹಾಗಾಗಿ ಸುಹಾಸ್ ತಂದೆ ರವೀಂದ್ರ ಅವರು ಈ ಹಿಂದೆಯೇ ಮಗ ಕಾಣೆಯಾಗಿದ್ದಾನೆ ಎಂದು ಕೋಲಾರ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಈಗ ಮಗ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸುಹಾಸ್‍ನ ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಪಾರ್ಟಿ ಹೇಗಾಯಿತು? ನಿಜಕ್ಕೂ ಅಲ್ಲಿ ಏನಾಗಿತ್ತು ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಪೊಲೀಸರು ಯುವಕನದ್ದು, ಸಹಜ ಸಾವೋ, ಕೊಲೆಯೋ ಎಂಬುದು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *