– ಆಸ್ಪತ್ರೆ ವೆಚ್ಚವನ್ನು ಭರಿಸಲಾಗದೆ ಮನೆಗೆ ಕರ್ಕೊಂಡು ಬಂದ ಪೋಷಕರು
– ಮನೆಯಲ್ಲಿ ಕೊನೆಯುಸಿರೆಳೆದ ಯುವಕ
ಹೈದರಾಬಾದ್: ಪೋಷಕರು ಸ್ವಲ್ಪ ದಿನದ ನಂತರ ಮದುವೆ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಮನನೊಂದು 22ರ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಕಾಮರೆಡ್ಡಿ ಗ್ರಾಮದಲ್ಲಿ ನಡೆದಿದೆ.
ನರೇಶ್(22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲತಃ ಬನ್ಸ್ವಾಡಾದ ಪೋಥಂಗಲ್ ಗ್ರಾಮದವನಾಗಿರು ನರೇಶ್ ಬೊರ್ಲಾಂನಲ್ಲಿ ಇರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದನು. ಮನೆಯವರು ಮದುವೆ ಮಾಡಿಸದ್ದಕ್ಕೆ ನರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮದುವೆ ಆಗ್ತಿಲ್ಲ ಎಂದು ಮನನೊಂದು ಟೆಕ್ಕಿ ಆತ್ಮಹತ್ಯೆ
ಕೆಲವು ದಿನಗಳಿಂದ ನರೇಶ್ ತನಗೆ ಮದುವೆ ಮಾಡಿಸಿ ಎಂದು ಪೋಷಕರಿಗೆ ಒತ್ತಾಯ ಮಾಡಿದ್ದಾನೆ. ಆದರೆ ಪೋಷಕರು ಸ್ವಲ್ಪ ದಿನ ನಂತರ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ನರೇಶ್ ಆರು ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನರೇಶ್ ವಿಷ ಸೇವಿಸಿರುವ ವಿಷಯ ತಿಳಿದ ಪೋಷಕರು ಆತನನ್ನು ಬನ್ಸ್ವಾಡಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ನರೇಶ್‍ಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ನಿಜಾಮಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ನರೇಶ್ ಆರೋಗ್ಯದ ಸ್ಥಿತಿ ಹದಗೆಡುತ್ತಿದ್ದಂತೆ ವೈದ್ಯರು ಆತನಿಗೆ ಹೈದರಾಬಾದ್‍ಗೆ ಕರೆದುಕೊಂಡು ಹೋಗಲು ಸೂಚಿಸಿದ್ದರು. ಆದರೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ಕಾರಣ ಕುಟುಂಬಸ್ಥರು ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ನರೇಶ್ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ.