ಚೆನ್ನೈ: 19 ವರ್ಷದ ಯುವಕನೊಬ್ಬ ಸಲಿಂಗಕಾಮಿಯಾಗಿದ್ದು, ಇದರಿಂದ ಸಮಾಜಕ್ಕೆ ಭಯಗೊಂಡು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೀಲಂಕಾರೈ ಬೀಚ್ ನಲ್ಲಿ ನಡೆದಿದೆ.
ಅವಿಂಶು ಪಾಟೀಲ್ ಮೃತ ಯುವಕ. ಈತ ಮೂಲತಃ ಮುಂಬೈ ನಗರದವನಾಗಿದ್ದು, ಕೆಲಸಕ್ಕೆಂದು ಮೂರು ತಿಂಗಳ ಹಿಂದೆ ಚೆನ್ನೈಗೆ ಬಂದಿದ್ದನು. ನಂತರ ಚೆನ್ನೈನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದನು. ಜುಲೈ 2 ರಂದು ನೀಲಂಕಾರೈ ಬೀಚ್ ನಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು.
ಈತ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಯಾರೂ ಜವಬ್ದಾರರಲ್ಲ ಎಂದು ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ಎರಡು ಪೋಸ್ಟ್ ಹಾಕಿದ್ದನು. ಮೊದಲಿಗೆ ಜುಲೈ 2 ರಂದು “ನಾನು ಹುಡುಗ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ನಾನು ನಡೆಯುವುದು, ಆಲೋಚನೆ ಮಾಡುವುದು ಮತ್ತು ಮಾತನಾಡುವುದು ಎಲ್ಲವೂ ಹುಡುಗಿಯರ ರೀತಿಯಾಗಿತ್ತು. ಇದನ್ನು ಭಾರತದ ಜನರು ಇಷ್ಟಪಡುವುದಿಲ್ಲ” ಎಂದು ಫೇಸ್‍ಬುಕ್‍ನಲ್ಲಿ ಹಿಂದಿಯಲ್ಲಿ ಬರೆದು ಪೋಸ್ಟ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಗ್ಲಿಷ್ ಪೋಸ್ಟ್ ನಲ್ಲಿ “ಸಲಿಂಗಕಾಮಿಗಳು ಮತ್ತು ತೃತೀಯ ಲಿಂಗಿಗಳಿಗೆ ಗೌರವ ನೀಡುವ ಇತರ ದೇಶಗಳ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಜೊತೆಗೆ ಸಲಿಂಗಕಾಮಿಗಳಿಗೆ ಸಹಾಯ ಮಾಡುವ ಭಾರತೀಯ ಜನರ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾನೆ. ದಯವಿಟ್ಟು ತನ್ನ ತಂದೆ-ತಾಯಿಯನ್ನು ದೂಷಿಸಬೇಡಿ, ಅವರಿಗೆ ಸಹಾಯ ಮಾಡಿ. ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನಾನು ಸಲಿಂಗಿಯಾಗಿ ಹುಟ್ಟಿದು ನನ್ನ ತಪ್ಪಲ್ಲ, ಇದು ದೇವರ ತಪ್ಪು ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾನೆ.
ಸಮುದ್ರದಲ್ಲಿ ಮೃತದೇಹವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.