ರಾಯಚೂರು: ಚಿಲ್ಲರೆ ಹಣಕ್ಕಾಗಿ ಸ್ವಂತ ದೊಡ್ಡಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಕುಲಸುಂಬಿ ಕಾಲೋನಿ ನಿವಾಸಿ, ಜೆಸ್ಕಾಂ ನಿವೃತ್ತ ನೌಕರರಾಗಿದ್ದ 62 ವರ್ಷದ ಚಿಕ್ಕಗಂಗಣ್ಣ ಕೊಲೆಯಾದ ವ್ಯಕ್ತಿ. ಚಿಕ್ಕಗಂಗಣ್ಣ ಅವರ ಶವ ಸೆಪ್ಟಂಬರ್ 11 ರಂದು ರಾಯಚೂರಿನ ರೈಲ್ವೇ ಹಳಿ ಪಕ್ಕದಲ್ಲಿ ಪತ್ತೆಯಾಗಿತ್ತು. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಮೃತ ದೇಹಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಚಿಕ್ಕಗಂಗಣ್ಣ ಮನೆಯಿಂದ ಕಾಣೆಯಾಗಿ ಮೂರುದಿನ ಬಳಿಕ ಕೊಳೆತ ಶವವಾಗಿ ಪತ್ತೆಯಾಗಿದ್ದರು.
Advertisement
Advertisement
ಚಿಕ್ಕಗಂಗಣ್ಣ ಮನೆಯವರ ಮಾಹಿತಿ ಆಧಾರದ ಮೇರೆಗೆ ತನಿಖೆ ಆರಂಭಿಸಿ ಪಶ್ಚಿಮ ಠಾಣೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಚಿಕ್ಕಗಂಗಣ್ಣ ಸಹೋದರನ ಪುತ್ರ ಯಲ್ಲಪ್ಪ ಹಾಗೂ ಅವನ ಸ್ನೇಹಿತರಾದ ತಿರುಪತಿ ಹಾಗೂ ಮಹೇಶ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಎರಡು ಚಿನ್ನದ ಉಂಗುರ ಹಾಗೂ ಕೊರಳಿನ ಸರ ಜಪ್ತಿ ಮಾಡಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
Advertisement
Advertisement
ಕೊಲೆಗೆ ಕಾರಣವೇನು?: ಗಣೇಶ ಚತುರ್ಥಿಗಾಗಿ 500 ರೂಪಾಯಿ ಹಣ ಕೊಡದ ಹಿನ್ನೆಲೆಯಲ್ಲಿ ಆರೋಪಿ ಯಲ್ಲಪ್ಪ ವಾಕಿಂಗ್‍ಗೆ ತೆರಳಿದ್ದ ಸ್ವಂತ ದೊಡ್ಡಪ್ಪನನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಸ್ನೇಹಿತರ ಸಹಾಯದಿಂದ ಪಬ್ಲಿಕ್ ಗಾರ್ಡನ್ ಹತ್ತಿರ ರೈಲ್ವೇ ಹಳಿ ಬಳಿ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಈ ಕುರಿತು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೋರ್ವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.