ರಾಯಚೂರು: ಇನ್ನೊಂದು ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನ ಮಾರಕಾಸ್ತ್ರ ಹಾಗೂ ಇಟ್ಟಿಗೆಯಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿದ್ರಾಂಪುರದಲ್ಲಿ ನಡೆದಿದೆ.
ರಾಯಚೂರಿನ ತಿಮ್ಮಾಪುರಪೇಟೆ ನಿವಾಸಿಯಾಗಿದ್ದ 28 ವರ್ಷದ ಟೀಕಣ್ಣ ಕೊಲೆಯಾದ ಯುವಕ. ಟೀಕಣ್ಣನ ಕೊಲೆ ಮಾಡಿ ಶವವನ್ನ ಜಮೀನಿನಲ್ಲಿ ಬಿಸಾಡಲಾಗಿದೆ. ಶ್ರೀನಿವಾಸ್ ಎಂಬವನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಟೀಕಣ್ಣ ಮೂರು ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಕನ್ನಡಾಂಬೆಯ ಫೋಟೋ ಹಾಕಿದ್ದರು. ಈ ವಿಚಾರಕ್ಕೆ ಶ್ರೀನಿವಾಸ್ ಮಧ್ಯ ಜಗಳವಾಗಿತ್ತು. ಆಗ ಶ್ರೀನಿವಾಸ್ ಟೀಕಣ್ಣನ ಮೇಲೆ ಹಲ್ಲೆ ಕೂಡ ಮಾಡಿದ್ದನು. ಆದ್ದರಿಂದ ಹಳೇ ವೈಷಮ್ಯದಿಂದ ಪುನಃ ಅವನೆ ಕೊಲೆ ಮಾಡಿರಬಹುದು ಎಂದು ಮೃತನ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.