ಮಡಿಕೇರಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಮಡಿಕೇರಿ ನಗರದ ಕನ್ನಂಡ ಬಾಣೆ ಬಡಾವಣೆಯಲ್ಲಿ ನಡೆದಿದೆ. ಬುಧವಾರ ರಾತ್ರಿ ಸುಮಾರು 10.30 ಸುಮಾರಿಗೆ ಆಟೋದಲ್ಲಿ ಬಂದು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ.
23 ವರ್ಷದ ಗೋಕುಲ್ ಮೃತ ದುರ್ದೈವಿ. ರಾತ್ರಿ ತನ್ನ ಮನೆಯತ್ತ ಬೈಕ್ ನಲ್ಲಿ ತೆರಳುತ್ತಿದ್ದ ಗೋಕುಲ್ ಮೇಲೆ ಆಟೋದಲ್ಲಿ ಬಂದಿದ್ದ ಹಂತಕರ ತಂಡ ಏಕಾಏಕಿ ದಾಳಿ ನಡೆಸಿದ್ದಾರೆ. ಹಲ್ಲೆಯಿಂದ ಗೋಕುಲ್ ಕುತ್ತಿಗೆ ಹಾಗು ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಕುಲ್‍ನನ್ನು ಗಮನಿಸಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯೋ ಪ್ರಯತ್ನ ನಡೆದರೂ ಅಷ್ಟೊತ್ತಿಗಾಗಲೆ ಗೋಕುಲ್ ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ಚಿಕ್ಕ ಗಲಾಟೆಯೇ ಗೋಕುಲ್ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ದುಶ್ಚಟಕ್ಕೆ ದಾಸನಾಗಿದ್ದ ಗೋಕುಲ್ ಸಾಕಷ್ಟು ಜನರೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು, ಇಂತಹದೇ ಒಂದು ಸಣ್ಣ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ 50 ಮೀಟರ್ ದೂರದಲ್ಲಿ ಕೆ.ಎ.12 ಎ.6526 ನಂಬರ್‍ವುಳ್ಳ ಆಟೋವೊಂದು ಪತ್ತೆಯಾಗಿದೆ. ಆಟೋದಲ್ಲಿ ರಕ್ತದ ಕಲೆಗಳು ಗೋಚರಿಸಿದ್ದು, ಹಂತಕರು ಕೊಲೆಗೆ ಇದೇ ಆಟೋವನ್ನ ಬಳಸಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಎಸ್‍ಪಿ ರಾಜೇಂದ್ರ ಪ್ರಸಾದ್ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾರ್ತಿಕ್ ಎಂಬಾತನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.