ಚಿತ್ರದುರ್ಗ: ಯುವಕನೋರ್ವ ಮದಕರಿ ನಾಯಕರ ಪ್ರತಿಮೆ ಮೇಲೆ ಕುಳಿತು ಪೋಸ್ ಕೊಟ್ಟು ಅವಮಾನ ಎಸಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ.
ಪುಷ್ಪಮಾಲೆ ಹಾಕಲೆಂದು ಪ್ರತಿಮೆ ಬಳಿ ಬಂದಿರುವ ಜೋಗಿಮಟ್ಟಿ ರಸ್ತೆಯ ನಾಗರಾಜ ಎಂಬ ಯುವಕ ಮದಕರಿ ಪ್ರತಿಮೆಯ ಕುದುರೆಯನ್ನೇರಿ ಅವಮಾನವೆಸಗಿದ್ದಾನೆ. ಸದ್ಯ ನಾಗರಾಜ ತೆಗೆದುಕೊಂಡ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ.
ಫೋಟೋ ವೈರಲ್ ಆಗುತ್ತಿದ್ದಂತೆ ನಾಯಕ ಸಮುದಾಯ ಹಾಗು ದುರ್ಗದ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರತಿಮೆ ಬಳಿಗೆ ತೆರಳಲು ಮೆಟ್ಟಿಲು ಅಳವಡಿಸಿದ್ದ ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ.
ಈ ಹಿಂದೆ ನಾಗರೀಕರ ವಿರೋಧದ ನಡುವೆ ಕೆಲ ತಿಂಗಳ ಹಿಂದೆ ಮೆಟ್ಟಿಲು ಅಳವಡಿಸಲಾಗಿತ್ತು. ಮದಕರಿ ನಾಯಕ ಪ್ರತಿಮೆ ಬಳಿ ಅಳವಡಿಸಿರುವ ಮೆಟ್ಟಿಲು ತೆರವಿಗೆ ಕೂಡ ಆಗ್ರಹಿಸಲಾಗಿತ್ತು. ಆದರೆ ಜಾಣ ಕುರುಡು ಪ್ರದರ್ಶಿಸಿದ್ದ ನಗರಸಭೆಗೆ ಹಿಡಿಶಾಪ ಹಾಕಿ ಸುಮ್ಮನಾಗಿದ್ದ ಮದಕರಿನಾಯಕರ ಅಭಿಮಾನಿಗಳು ಇಂದು ಮೆಟ್ಟಿಲು ತೆರವಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv