ಪಾಟ್ನಾ: ಯುವಕನೊಬ್ಬ ತನ್ನ ಫೇಸ್‍ಬುಕ್ ಗೆಳತಿಯನ್ನು ಮೊದಲ ಬಾರಿ ಭೇಟಿಯಾಗಲು ಹೋದಾಗ ಆಕೆಯನ್ನು ನೋಡಿ ಪಾರ್ಕ್ ನಿಂದಲೇ ಓಡಿ ಹೋದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಯುವಕನೊಬ್ಬ ಫೇಸ್‍ಬುಕ್‍ನಲ್ಲಿ ಸುಂದರವಾದ ಯುವತಿಯ ಖಾತೆಯನ್ನು ನೋಡಿ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಯುವತಿ ಕೂಡ ಆ ಯುವಕನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಯುವಕ ಯುವತಿಗೆ ಮೆಸೇಜ್ ಮಾಡಲು ಆರಂಭಿಸಿ ಹತ್ತಿರವಾಗಿದ್ದಾನೆ. ಯುವತಿ ಕೂಡ ಆತನ ಮೆಸೇಜ್‍ಗೆ ಪ್ರತಿಕ್ರಿಯಿಸುತ್ತಿದ್ದಳು. ಹೀಗೆ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ.
Advertisement
Advertisement
ಮದುವೆ ಆಗುವ ಮೊದಲು ನಾವಿಬ್ಬರು ಭೇಟಿ ಆಗೋಣ ಎಂದು ಯುವಕ ಯುವತಿ ಬಳಿ ಕೋರಿಕೆ ಇಟ್ಟಿದ್ದಾನೆ. ಯುವತಿ ಈ ಕೋರಿಕೆಯನ್ನು ಸ್ವೀಕರಿಸಿ ಭೇಟಿಗೆ ಒಪ್ಪಿಕೊಂಡಿದ್ದಾಳೆ. ಹೊಸ ವರ್ಷದಂದು ಇಬ್ಬರು ಪಾರ್ಕ್ ವೊಂದರಲ್ಲಿ ಭೇಟಿ ಆಗಲು ನಿರ್ಧರಿಸಿದ್ದಾರೆ. ಭೇಟಿಯಾದ ಬಳಿಕ ತಮ್ಮ ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದರು.
Advertisement
Advertisement
ತನ್ನ ಫೇಸ್‍ಬುಕ್ ಗೆಳತಿಯನ್ನು ಭೇಟಿ ಮಾಡಲು ಯುವಕ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಹೂಗುಚ್ಚವನ್ನು ತೆಗೆದುಕೊಂಡು ಪಾರ್ಕಿಗೆ ಬಂದಿದ್ದ. ಯುವತಿ ಪಾರ್ಕಿಗೆ ಬಂದ ಬಳಿಕ ಆಕೆಯನ್ನು ನೋಡಿ ಯುವಕ ಒಂದು ಕ್ಷಣ ದಂಗಾಗಿದ್ದಾನೆ. ಫೇಸ್‍ಬುಕ್ ನಲ್ಲಿದ್ದ ಯುವತಿ ಬೇರೆ ಹಾಗೂ ಎದುರಿಗೆ ಇದ್ದ ಯುವತಿ ಬೇರೆ ಎಂದು ತಿಳಿದ ಯುವಕ ಪಾರ್ಕಿನಿಂದಲೇ ಓಡಿ ಹೋಗಿದ್ದಾನೆ.
ಯುವಕನಿಂದ ಮೋಸ ಹೋಗಿದ್ದೇನೆ ಎಂದು ಯುವತಿ ಜನವರಿ 2ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಗ ಪೊಲೀಸರು ಯುವಕನನ್ನು ಠಾಣೆಗೆ ಕರೆಸಿ ಮಾತನಾಡಿಸಿದ್ದಾರೆ. ಆಗ ಯುವಕ “ಈ ಯುವತಿ ಫೇಸ್‍ಬುಕ್‍ನಲ್ಲಿ ಬೇರೆ ಫೋಟೋ ಹಾಕಿ ನನಗೆ ಮೋಸ ಮಾಡಿದಲ್ಲದೇ ನನ್ನ ಬಳಿ ಸುಳ್ಳು ಹೇಳಿದ್ದಾಳೆ. ನಾನು ಶ್ರೀಮಂತೆ ಎಂದು ಆಕೆ ನನ್ನ ಬಳಿ ಹೇಳಿದ್ದಳು. ಆದರೆ ಆಕೆ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಾಳೆ” ಎಂದು ತಿಳಿಸಿದ್ದಾನೆ.
ಯುವಕನ ಮಾತು ಕೇಳಿ ಯುವತಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಾಳೆ. ಅಲ್ಲದೇ ಇಬ್ಬರು ಪೊಲೀಸ್ ಠಾಣೆಯಲ್ಲೇ ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಲ್ಲಿಸಿ, ಇಬ್ಬರಿಗೂ ಬುದ್ಧಿ ಹೇಳಿ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.