ದಾವಣಗೆರೆ: ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣಶೆಟ್ಟಿ ಲೇಔಟ್ ಹಿಂಭಾಗದ ಖಾಲಿ ನಿವೇಶನದಲ್ಲಿ ನಡೆದಿದೆ.
ದಯನತ್ ಖಾನ್ (20) ಮೃತ ಯುವಕ. ದಹನತ್ ಹೊನ್ನಾಳಿ ಪಟ್ಟಣದ ದುರ್ಗಿ ಗುಡಿ ನಿವಾಸಿಯಾಗಿದ್ದು, ಗ್ಯಾರೇಜ್‍ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿಗಳು ದಯನತ್‍ನನ್ನು ರಾತ್ರಿ ಜೊತೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ.
ದಯನತ್ ಖಾನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇದೇ ವಿಚಾರವಾಗಿ ಮೂರು ದಿನಗಳ ಹಿಂದೆ ಮನೆ ಮುಂದೆ ಗಲಾಟೆಯಾಗಿತ್ತು. ಈಗ ಯುವತಿ ಮನೆ ಕಡೆಯವರೇ ಕೊಲೆ ಮಾಡಿಸಿದ್ದಾರೆ ಎಂದು ದಯನತ್ ಪೋಷಕರು ಆರೋಪಿಸುತ್ತಿದ್ದಾರೆ.
ಈ ಭೀಕರ ಕೊಲೆಗೆ ಹೊನ್ನಾಳಿ ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಕೊಲೆಯ ಶಂಕಿತ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಸ್ಥಳಕ್ಕೆ ಎಸ್‍ಪಿ ಉದ್ದೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.