ಲಕ್ನೋ: ರಸ್ತೆಯಲ್ಲಿ ಬಟ್ಟೆ ಹರಿದಿದ್ದಕ್ಕೆ ಯುವತಿಯೊಬ್ಬಳು ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದ ಜನಪದ್ ಮೊರಾದಾಬಾದ್ ನಲ್ಲಿ ನಡೆದಿದೆ. ಸದ್ಯ ಯುವತಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯುವತಿ ಬಟ್ಟೆ ಹರಿದಿದ್ದಕ್ಕೆ ಯುವಕನನ್ನು ಥಳಿಸುತ್ತಿದ್ದಳು. ಇದನ್ನು ನೋಡಿದ ಸ್ಥಳೀಯರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋವನ್ನು ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಜನರು ಯುವತಿಯ ಉಡುಪು ಹರಿದಿದ್ದೀಯಾ ಎಂದು ಪ್ರಶ್ನಿಸಿ ಯುವಕನಿಗೆ ಥಳಿಸಿದ್ದಾರೆ. ಅಲ್ಲದೆ ಯುವತಿಯ ಉಡುಪು ಹರಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಯುವಕನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋಗಳು ಏನೇ ಇರಲಿ ಅದು ತನಿಖೆಯ ಭಾಗವಾಗಿರುತ್ತದೆ ಎಂದು ಹೇಳಿದ್ದಾರೆ.
ಆಗಿದ್ದೇನು?
ಯುವತಿ ಪ್ರತಿದಿನ ಟ್ಯೂಶನ್‍ಗೆ ಹೋಗುತ್ತಿದ್ದಳು. ಈ ವೇಳೆ ಯುವಕ ಆಕೆಯನ್ನು ಹಿಂಬಾಲಿಸುತ್ತಿದ್ದಳು. ಸೋಮವಾರ ಕೂಡ ಯುವತಿ ಟ್ಯೂಶನ್‍ಗೆ ಎಂದು ಹೋಗುತ್ತಿದ್ದಾಗ ಯುವಕ ಆಕೆಯ ಹತ್ತಿರ ಬಂದು ಬಲವಂತ ಮಾಡಿದ್ದಾನೆ. ಅಲ್ಲದೆ ಆಕೆಯ ಬಟ್ಟೆ ಕೂಡ ಹರಿದಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಜೋರಾಗಿ ಕಿರುಚಾಡಿದ್ದಾಳೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಜನರು ಜಮಾಯಿಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳೀಯರ ಜೊತೆ ಯುವತಿ ಕೂಡ ಯುವಕನಿಗೆ ಕಾಲಿನಿಂದ ಒದಿದ್ದಾಳೆ. ಈ ವಿಡಿಯೋದಲ್ಲಿ ಯುವಕ ತನ್ನ ಹೆಸರು ಕಬೀರ್ ಎಂದು ತಿಳಿಸಿದ್ದಾನೆ.