ಚಿಕ್ಕಬಳ್ಳಾಪುರ: ಆಂಧ್ರ ಯುವಕ ಹಾಗೂ ಕರ್ನಾಟಕದ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ನಂದಿ ಬೆಟ್ಟಕ್ಕೆ ಬಂದು ಹೋದ ವಿಚಾರ ಯುವತಿ ಮನೆಯವರಿಗೆ ತಿಳಿದು ಯುವಕನ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಕರ್ನಾಟಕ-ಆಂಧ್ರ ಗಡಿಭಾಗದ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.
ಆಂಧ್ರದ ಹಿಂದೂಪುರ ತಾಲೂಕಿನ ಕೆಂಚನಪಲ್ಲಿ ಗ್ರಾಮದ ನಿವಾಸಿ. ಗೌರಿಬಿದನೂರು ಮುನಿಸಿಪಾಲ್ ಕಾಲೇಜಿನಲ್ಲಿ ಉಚ್ಚೋದನಹಳ್ಳಿಯ ಯುವತಿ ಹಾಗೂ ಗಾಯಾಳು ಅಶೋಕ್ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಕಳೆದ ಒಂದು ವಾರದ ಹಿಂದೆ ಇಬ್ಬರು ನಂದಿಬೆಟ್ಟಕ್ಕೆ ಬಂದು ಸುತ್ತಾಡಿಕೊಂಡು ಹೋಗಿದ್ದರು.
Advertisement
Advertisement
ಈ ವಿಷಯ ಯುವತಿ ಪೋಷಕರಿಗೆ ತಿಳಿದು ಮನೆಯಲ್ಲಿ ಗಲಾಟೆ ನಡೆದಿದೆ. ಇದರಿಂದ ಯುವತಿ ಅಣ್ಣ ಅಮರನಾಥ್, ಪ್ರಿಯಕರ ಅಶೋಕ್‍ಗೆ ಕರೆ ಮಾಡಿ ಮಾತಾಡೋಣ ಬಾ ಎಂದು ಕರ್ನಾಟಕ ಆಂಧ್ರ ಗಡಿಭಾಗದ ಕುಡುಮಲಕುಂಟೆ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಯುವಕ ಅಶೋಕ್ ತನ್ನ ಬಾವ ಬಾಲು ಜೊತೆ ಬೈಕ್ ಮೂಲಕ ಕರ್ನಾಟಕದ ಕುಡುಮಲಕುಂಟೆ ಬಳಿ ಬಂದಿದ್ದನು.
Advertisement
ಅಶೋಕ್ ಬರುತ್ತಿದ್ದಂತೆ ಆತನ ಮೇಲೆ ಯುವತಿಯ ಅಣ್ಣ ಅಮರನಾಥ್ ಹಾಗೂ ಆತನ ಜೊತೆ ಇದ್ದ ನಾಲ್ವರು ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಹನುಮಪ್ಪ ಎಂಬಾತ ಕುಡುಗೋಲಿನಿಂದ ಹಲ್ಲೆ ಮಾಡಿದ ಪರಿಣಾಮ ಕುಡುಗೋಲು ಅಶೋಕ್ ಕೈ ತೋಳಿನ ಬೆನ್ನಿನ ಭಾಗಕ್ಕೆ ಇಳಿದಿದ್ದು, ಗಂಭೀರತರನಾದ ಗಾಯವಾಗಿದೆ. ಕೂಡಲೇ ಅಲ್ಲಿಂದ ಪರಾರಿಯಾದ ಅಶೋಕ್ ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
Advertisement
ಅಶೋಕ್ ಈ ಬಗ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಗೌರಿಬಿನೂರು ಗ್ರಾಮಾಂತರ ಪಿಎಸ್‍ಐ ಗಾಯಾಳು ಅಶೋಕ್ ಹೇಳೀಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಈ ಸಂಬಂಧ ಯುವತಿಯ ಅಣ್ಣ ಅಮರನಾಥ್ ಹಾಗೂ ಆರೋಪಿಗಳಾದ ಹನುಮಪ್ಪ, ಸುದೀಪ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಸದ್ಯ ನ್ಯಾಯಾಧೀಶರು ಮೂವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದು, ಮೂವರು ಆರೋಪಿಗಳು ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ ಸೇರಿದ್ದಾರೆ. ಮತ್ತೊಂದೆಡೆ ಗಾಯಾಳು ಅಶೋಕ್ ಪರಿಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ಅನಿವಾರ್ಯ ಹಿನ್ನೆಲೆ ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.