ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಪ್ರೇಯಸಿಯ ಕೊಲೆಗೆ ಯತ್ನ

Public TV
1 Min Read
tmk murder attempt

ತುಮಕೂರು: ಮದುವೆ ತಡವಾಗಿ ಆಗೋಣ ಎಂದಿದ್ದಕ್ಕೆ ಜಿ.ಪಂ ಸದಸ್ಯೆಯ ಮಗ ತನ್ನ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.

24 ವರ್ಷದ ಮಹಾವೀರ ಭಕ್ತ ಗುರುನಾನಕ್ ಎಂಬ ಹುಚ್ಚು ಪ್ರೇಮಿ ತನ್ನ 23 ವರ್ಷದ ಪ್ರಿಯತಮೆಯ ಹತ್ಯೆಗೆ ಮಂದಾಗಿದ್ದಾನೆ. ಮದಲೂರು ಗ್ರಾಮಕ್ಕೆ ಗುರುವಾರ ಯುವತಿಯನ್ನು ಕರೆಸಿಕೊಂಡು ಅತೀ ಶೀಘ್ರದಲ್ಲೇ ಮದುವೆಯಾಗುವಂತೆ ಒತ್ತಡ ಹಾಕಿದ್ದಾನೆ. ಆದರೆ  ಚಿತ್ರದುರ್ಗದಲ್ಲಿ ಬಿ.ಎಸ್ಸಿ ನರ್ಸಿಂಗ್ ಓದುತ್ತಿರುವ ಯುವತಿ ಈಗಲೇ ಮದುವೆ ಬೇಡ ಎಂದು ಹೇಳಿದ್ದಾಳೆ.

love complaint 1

ಮದುವೆ ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಮಹಾವೀರ್, ಯುವತಿ ಧರಿಸಿದ್ದ ಚೂಡಿದಾರದ ವೇಲನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಪರಿಣಾಮ ಯುವತಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ತನ್ನ ಲವ್ವರ್ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಮಹಾವೀರ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಜ್ಞೆ ಬಂದ ಬಳಿಕ ಆಕೆ ತನ್ನ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ.

ಘಟನೆಯಿಂದ ಯುವತಿಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾರಾರಿಯಾಗಿರುವ ಆರೋಪಿಯನ್ನು  ಭಕ್ತ ಗುರುನಾನಕ್ ಮದಲೂರು ಜಿ.ಪಂ ಕ್ಷೇತ್ರದ ಸದಸ್ಯೆ ಲಕ್ಷ್ಮಿ ದೇವಮ್ಮಳ ಮಗನೆಂದು ತಿಳಿದು ಬಂದಿದೆ.

ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article