ಬೆಳಗಾವಿ: ಪ್ರೀತಿಸಿದ ಯುವತಿ ಮನೆಯವರು ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಫೇಸ್‍ಬುಕ್ ಲೈವ್‍ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಅರಭಾವಿ ಗ್ರಾಮದಲ್ಲಿ ನಡೆದಿದೆ.
ಪ್ರವೀಣ ಚಂಡುಗೋಳ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಪ್ರವೀಣ ತನ್ನದೇ ಗ್ರಾಮದ ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದನು. ಈ ವಿಷಯವನ್ನು ಯುವತಿ ಕೂಡ ಸೆಲ್ಫಿ ವಿಡಿಯೋ ಮಾಡುವ ಮೂಲಕ ಈ ವಿಷಯವನ್ನು ಬಹಿರಂಗಗೊಳಿಸಿದ್ದಾಳೆ.
ವಿಡಿಯೋದಲ್ಲಿ ಯುವತಿ, ನಾನು ಮತ್ತು ಪ್ರವೀಣ ತುಂಬಾ ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀತಿಯನ್ನು ಮನೆಯಲ್ಲಿ ಒಪ್ಪದ ಕಾರಣ ನಾನು ಹಾಗೂ ಪ್ರವೀಣ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಸಿದ್ಧ ಇದ್ದೇನೆ ಎಂದು ತಿಳಿಸಿದ್ದಾಳೆ.
ಇತ್ತ ಪ್ರವೀಣ ವಿಡಿಯೋದಲ್ಲಿ, ಎಲ್ಲರೂ ಬೇರೆ ಬೇರೆ ವಿಷಯಕ್ಕೆ ಫೇಸ್‍ಬುಕ್ ಲೈವ್‍ಗೆ ಬರುತ್ತಾರೆ. ನನ್ನ ಜೀವನ ಸಾಕಾಗಿದೆ. ಹಾಗಾಗಿ ನಾನು ಫೇಸ್‍ಬುಕ್ ಲೈವ್‍ಗೆ ಬಂದಿದ್ದೇನೆ. ನಾನು ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೇನೆ. ಆದರೆ ಅವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ನನಗೆ ತುಂಬಾ ಅನ್ಯಾಯ ಮಾಡುತ್ತಿದ್ದಾರೆ. ನಾನು ಬದುಕಬಾರದು ಎಂಬ ಸ್ಥಿತಿಗೆ ನನ್ನನ್ನು ತಲುಪಿಸಿದ್ದಾರೆ. ನನ್ನ ಸಾವಿಗೆ ಯುವತಿ ಮನೆಯವರಾದ ಬಸು, ತುಕಾರಾಮ, ಮಹಾದೇವ, ಈರಪ್ಪ ಎಂದು ಆರೋಪಿಸಿದ್ದಾನೆ.
ಸದ್ಯ ಅಸ್ವಸ್ಥ ಪ್ರವೀಣ ಆಸ್ಪತ್ರೆಗೆ ದಾಖಲಾಗಿದ್ದು, ಸಾವು- ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.