ಮಂಗಳೂರು: ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಸಿಟ್ಟಾದ ಯುವಕನೊಬ್ಬ ಅದೇ ಕಸವನ್ನು ಬಟ್ಟೆ ಅಂಗಡಿ ಒಳಗೆ ಸುರಿದ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.
ರಾಮಕೃಷ್ಣ ಮಿಷನ್ ವತಿಯಿಂದ ಪ್ರತಿ ಆದಿತ್ಯವಾರ ನೂರಾರು ಸ್ವಯಂ ಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುತ್ತಾರೆ. ಆದ್ರೆ ಮಾರನೇ ದಿನ ಮತ್ತೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕುತ್ತಿದ್ದರು. ಮಂಗಳೂರಿನ ಕರಂಗಲ್ಪಾಡಿಯಲ್ಲೂ ಡಿ.31 ರ ಆದಿತ್ಯವಾರ ಸ್ವಯಂಸೇವಕರು ಸ್ವಚ್ಛಗೊಳಿಸಿದ್ದು, ಅದೇ ದಿನ ಸ್ಥಳೀಯ ಶಾಪ್ ನ ಸಿಬ್ಬಂದಿ ಅದೇ ಜಾಗದಲ್ಲಿ ಕಸ ಎಸೆದಿದ್ದಾರೆ.
ಇದರಿಂದ ಕೋಪಗೊಂಡ ಸೌರಜ್ ಮಂಗಳೂರು ಎಂಬ ಯುವಕ ಶಾಪ್ ನ ಸಿಬ್ಬಂದಿ ಎಸೆದ ಕಸವನ್ನು ರಸ್ತೆ ಬದಿಯಿಂದ ಸಂಗ್ರಹಿಸಿ ಶಾಪ್ ಒಳಗೆ ಸುರಿದಿದ್ದಾರೆ. ಸ್ವಚ್ಛಗೊಳಿಸಿದ ಸ್ಥಳದಲ್ಲೇ ಕಸ ಸುರಿದ ಶಾಪ್ ನ ಸಿಬ್ಬಂದಿ ಒಂದು ಕ್ಷಣ ವಿಚಲಿತರಾದ್ರೂ ಸೌರಜ್ ನ ಕೋಪದ ಮುಂದೆ ತಣ್ಣಗಾಗಿದ್ದಾರೆ. ಸೌರಜ್ ಫೇಸ್ ಬುಕ್ ಲೈವ್ ಮೂಲಕ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ಹಿಂದೆ ಮೋರ್ಗನ್ಸ್ ಗೇಟ್ ಬಳಿಯೂ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಅಕ್ಕಪಕ್ಕದ ಮನೆಯವರು ಕಸ ಸುರಿದಿದ್ದು, ಸೌರಜ್ ಅದೇ ಕಸವನ್ನು ಸಂಗ್ರಹಿಸಿ ಮನೆಯೊಳಗೆ ಹಾಕಿದ್ದರು. ಆ ನಂತರವಾಗಿ ಮನೆಯವರು ಎಚ್ಚೆತ್ತು ಕಸವನ್ನು ತೊಟ್ಟಿಯಲ್ಲಿ ಹಾಕಲು ಆರಂಭಿಸಿದ್ರು. ಇನ್ಮುಂದೇ ಇದೇ ರೀತಿಯ ಅಭಿಯಾನ ಮಾಡಲು ರಾಮಕೃಷ್ಣ ಮಿಷನ್ ನ ಸ್ವಯಂ ಸೇವಕರು ನಿರ್ಧರಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ.
https://www.youtube.com/watch?v=SX_4fh8j_rk