ಕಾರವಾರ: ನೆಲ್ಲಿಕಾಯಿ ಮರದಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಪಕ್ಕೆಲುಬಿಗೆ ತುಂಡಾದ ರೆಂಬೆ ಹೊಕ್ಕು ಆಸ್ಪತ್ರೆಗೆ ಸೇರಿದ್ದ ಯುವಕ ಪವಾಡಸದೃಶವಾಗಿ ಪಾರಾಗಿ ಬದುಕಿ ಉಳಿದಿದ್ದಾನೆ.
ಯಲ್ಲಾಪುರ ತಾಲೂಕಿನ ಮಂಚಿಕೇರಿಯ 21 ವರ್ಷದ ಮಹಾಬಲೇಶ್ವರ ಸಿದ್ದಿ ಎಂಬಾತ ಶನಿವಾರ ಸಂಜೆ ನೆಲ್ಲಿಕಾಯಿ ಮರ ಕಡಿಯಲೆಂದು ಮರ ಹತ್ತಿದ್ದಾನೆ. ಆದರೆ ಮರ ಇಳಿಯಬೇಕಾದರೆ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಕೆಳಗೆ ಬಿದ್ದಿದ್ದ ಮರದ ತುಂಡಾದ ರೆಂಬೆ ಈತನ ದೇಹ ಪ್ರವೇಶಿಸಿ ಪಕ್ಕೆಲುಬು ದಾಟಿ ಹೊರಗೆ ಬಂದಿದೆ.
Advertisement
Advertisement
ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಈ ರೆಂಬೆ ಈತನ ಹೃದಯ ದಾಟಿ ಹೊರಬರುತ್ತಿತ್ತು. ಆದರೆ ಅದೃಷ್ಟವಶಾತ್ ರೆಂಬೆ ಮಹಾಬಲೇಶ್ವರನ ಪಕ್ಕೆಲುಬು ಮೂಲಕ ಹೊರ ಬಂದಿದೆ. ಅಲ್ಲೇ ಇದ್ದ ಈತನ ಸ್ನೇಹಿತರು ಈ ರೆಂಬೆಯನ್ನು ತೆಗೆಯಲು ಯತ್ನಿಸಿದ್ದಾರೆ. ಪಕ್ಕೆಲುಬಿನ ಮೂಲಕ ರೆಂಬೆ ತೂರಿ ಬಂದಿದ್ದರಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುವನ್ನು ಶಿರಸಿ ಟಿಎಸ್‍ಎಸ್ ಆಸ್ಪತ್ರೆಗೆ ರವಾನಿಸಲಾಯಿತು.
Advertisement
ವೈದ್ಯರು ತಕ್ಷಣ ಈತನಿಗೆ ಚಿಕಿತ್ಸೆ ನೀಡಿದ್ದರಿಂದ ಮಹಾಬಲೇಶ್ವರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಹಾಬಲೇಶ್ವರ ಸಿದ್ದಿ ಗಾಯಗೊಂಡಿರುವ ರೀತಿ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಮರದ ರೆಂಬೆಯನ್ನು ದೇಹದಿಂದ ಹೊರ ತೆಗೆಯುವುದೇ ವೈದ್ಯರಿಗೇ ಸವಾಲಾಗಿತ್ತು.
Advertisement