ಹೈದರಾಬಾದ್: ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಯುವ ಜನತೆ ಸಾವಿನ ದವಡೆಗೆ ಸಿಲುಕುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು ಕೂಡ ದುರಂತಗಳು ನಡೆಯುತ್ತಿದೆ. ಸದ್ಯ ತೆಲಂಗಾಣದ ನಿಜಾಮಬಾದ್ ಜಿಲ್ಲೆಯ ಭೀಮ್‍ಗಲ್‍ನಲ್ಲಿ ಯುವಕ ಟಿಕ್‍ಟಾಕ್ ವಿಡಿಯೋ ಮಾಡಲು ಯತ್ನಿಸಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಇಂದ್ರಪುರಂ ದಿನೇಶ್ (22) ನೀರಿನಲ್ಲಿ ಕೊಚ್ಚಿ ಹೋದ ಯುವಕರಾನಾಗಿದ್ದು, ಸ್ನೇಹಿತರೊಂದಿಗೆ ತುಂಬಿ ಹರಿಯುತ್ತಿದ್ದ ಚೆಕ್ ಡ್ಯಾಂ ನೋಡಲು ತೆರಳಿದ್ದ ವೇಳೆ ಘಟನೆ ನಡೆದಿದೆ.
ಮೂವರು ಸ್ನೇಹಿತರೊಂದಿಗೆ ತೆರಳಿದ್ದ ದಿನೇಶ್ ನೀರಿನಲ್ಲಿ ಇಳಿದು ಟಿಕ್‍ಟಾಕ್‍ಗಾಗಿ ವಿಡಿಯೋ ಮಾಡಲು ಯತ್ನಿಸಿದ್ದರು. ಈ ವೇಳೆ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಸ್ನೇಹಿತರ ಎದುರೇ ದಿನೇಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.
ಘಟನೆ ನಡೆದ ಸ್ಥಳದಲ್ಲಿದ್ದ ಕೆಲವರು ದಿನೇಶ್‍ರ ಮತ್ತಿಬ್ಬರು ಸ್ನೇಹಿತರಾದ ದಿನೇಶ್ ಹಾಗೂ ಮನೋಜ್‍ರನ್ನು ರಕ್ಷಣೆ ಮಾಡಿದ್ದರು. ಆದರೆ ಹೊಳೆಯ ಮಧ್ಯಕ್ಕೆ ತೆರಳಿದ್ದ ದಿನೇಶ್‍ನನ್ನು ರಕ್ಷಣೆ ಮಾಡಲು ಯತ್ನಿಸಿದರು ಸಾಧ್ಯವಾಗಿರಲಿಲ್ಲ. ಮೃತ ದಿನೇಶ್ ಪೋಷಕರಿಗೆ ಮೊದಲ ಮಗನಾಗಿದ್ದು, ದುಬೈನಲ್ಲಿ ಕೆಲಸ ಮಾಡುತ್ತಿದ್ದ. ದಿನೇಶ್ 3 ತಿಂಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಆಗಮಿಸಿದ್ದ. ಮುಂದಿನ ತಿಂಗಳು ಮತ್ತೆ ದುಬೈಗೆ ವಾಪಸ್ ತೆರಳಬೇಕಿತ್ತು ಎಂಬ ಮಾಹಿತಿ ಲಭಿಸಿದೆ. ನೀರಿನಲ್ಲಿ ಕೊಚ್ಚಿ ಹೋದ ದಿನೇಶ್‍ರ ಮೃತ ದೇಹ ಹೊರ ತೆಗೆಯಲು ಸತತ 24 ಗಂಟೆ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಕೊನೆಗೂ ಮೃತ ದೇಹವನ್ನು ಪತ್ತೆ ಮಾಡಿದೆ.