ಉಡುಪಿ: ಟಾಯ್ಲೆಟ್ ಪಿಟ್ ಕ್ಲೀನ್ ಮಾಡಲು ಹೋದ ಯುವಕನೋರ್ವ ಪಿಟ್ ಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಎಂ ಕೋಡಿ ಎಂಬಲ್ಲಿ ಶನಿವಾರ ನಡೆದಿದೆ.
ಮೂಲತಃ ಕುಂದಾಪುರದ ತೆಕ್ಕಟ್ಟೆ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂದೀಪ್ ಮೃತ ವ್ಯಕ್ತಿ.
Advertisement
ಕೋಡಿಯ ಉಸ್ಮಾನ್ ಎಂಬವರ ಮನೆಯಲ್ಲಿ ಇಂದು ಶುಭ ಕಾರ್ಯವಿದ್ದು, ಈ ಹಿನ್ನೆಲೆ ಟಾಯ್ಲೆಟ್ ಪಿಟ್ ಶುಚಿಗೊಳಿಸಲು ಸ್ಥಳೀಯ ವ್ಯಕ್ತಿಯೋರ್ವನ ಸಹಾಯದಿಂದ ತೆಕ್ಕಟ್ಟೆಯ ಸಂದೀಪ್ ಎನ್ನುವವರನ್ನು ಕರೆಸಲಾಗಿತ್ತು. ಅವರು ಟಾಯ್ಲೆಟ್ ಪಿಟ್ ಶುಚಿ ಕೆಲಸಕ್ಕೆ ಅಣಿಯಾಗುವ ವೇಳೆ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದಾರೆ. ಕೂಡಲೇ ಸಂದೀಪರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಕೂಡ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ರನ್ನು ಕೆಲಸಕ್ಕೆ ಕರೆತಂದ ಉಸ್ಮಾನ್ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ.
Advertisement
ಮಲಹೊರುವ ಪದ್ಧತಿ ನಿಷೇಧ ಹಾಗೂ ಮಾನವ ಶಕ್ತಿಯಿಂದ ಮಲ ತೆಗೆಯುವ ಪದ್ಧತಿ ಕಾನೂನು ಬಾಹಿರವಾದರೂ ಕೂಡ ಅದನ್ನು ಮಾಡಲು ಹೊರಟ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಪದ್ಧತಿ ಮಾಡಿದ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಎಲ್ಲಾ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮೃತ ವ್ಯಕ್ತಿಯ ಸಾವಿಗೆ ನ್ಯಾಯ ಒದಗಿಸುವ ಕಾರ್ಯವಾಗಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸುತ್ತಿವೆ.