Belgaum
ಮದ್ಯಪಾನ ಬಿಡಿಸಲು ಸ್ವಾಮೀಜಿ ಕೊಟ್ಟ ನಾಟಿ ಔಷಧಿಗೆ ಯುವಕ ಬಲಿ

ಬೆಳಗಾವಿ: ಸ್ವಾಮೀಜಿಯೊಬ್ಬರು ಕುಡಿತ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಾರ್ಚ್ 14 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತ ಯುವಕ. ಚಿಕ್ಕ ವಯಸ್ಸಿನಲ್ಲೇ ವಿಪರೀತ ಕುಡಿತಕ್ಕೆ ದಾಸರಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಸಿದ್ದರಾಯ್ ನಾಯಕ್‍ರನ್ನು ಹಣ್ಣಿಗೇರಿ ಗ್ರಾಮದ ಸ್ವಾಮೀಜಿ ಶಿವಪ್ಪ ಭಾವಿ ಎಂಬವರ ಬಳಿ ಚಿಕಿತ್ಸೆ ಪಡೆಯಲು ಕರೆ ತಂದಿದ್ದರು. ಸ್ವಾಮೀಜಿ ನೀಡಿದ್ದ ಔಷಧಿಯನ್ನು ಕುಡಿದ ಸಿದ್ದರಾಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ವಿಷಯವಾಗಿ ದೂರು ದಾಖಲಿಸಿಕೊಳ್ಳದ ನೇಸರ್ಗಿ ಪಟ್ಟಣದ ಪೊಲೀಸರು ರಾಜಿ ಪಂಚಾಯತಿ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಈ ವಿಷಯ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ನೇಸರ್ಗಿ ಠಾಣೆ ಪೊಲೀಸರು ಐಪಿಸಿ 328, 304(ಎ) ಅನ್ವಯ ದೂರು ದಾಖಲಿಸಿಕೊಂಡು ತಡರಾತ್ರಿ ಸ್ವಾಮಿಜೀ ಶಿವಪ್ಪ ಭಾವಿಯನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಪಂಚರು 3.5 ಲಕ್ಷ ರೂಪಾಯಿಗೆ ರಾಜಿ ಪಂಚಾಯತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿದ್ದರು. ಒಟ್ಟು ಮೊತ್ತದಲ್ಲಿ ಸಿದ್ದರಾಯ್ ಪೋಷಕರಿಗೆ 85 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೃತನ ಕುಟುಂಬಕ್ಕೆ ಹಣ ದೊರಕಿಲ್ಲ. ಉಳಿದ ಹಣ ಯಾರ ಪಾಲಾಗಿದೆ ಎಂಬುದು ತನಿಖೆಯ ಮುಖಾಂತರ ತಿಳಿಯಬೇಕಿದೆ.
ಕಳೆದ ಹಲವು ವರ್ಷಗಳಿಂದ ಸ್ವಾಮೀಜಿ ಶಿವಪ್ಪ ಭಾವಿ ಗ್ರಾಮದಲ್ಲಿ ಮದ್ಯಪಾನ ಬಿಡಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಇನ್ನೂ ಯುವಕ ಸಿದ್ದರಾಯ್ ದೇಹವನ್ನು ಸುಟ್ಟು ಹಾಕಿದ್ದು, ಎಲ್ಲ ರೀತಿಯ ಸುಳಿವು ಮುಚ್ಚಿಹಾಕಲು ಪ್ರಯತ್ನಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
