ತೋಟಕ್ಕೆ ಬಂದ ಕೋತಿಗಳನ್ನು ಕೊಲ್ಲಲು ಹೋದ ಯುವಕ ತಾನೇ ಹೆಣವಾದ!

Public TV
2 Min Read
Areca nut plants 1

ಕಾರವಾರ: ತೋಟಕ್ಕೆ ಉಪಟಳ ಕೊಡುತ್ತಿದ್ದ ಮಂಗಗಳನ್ನು ಕೊಲ್ಲಲು ನಾಡ ಬಂದೂಕಿಗೆ ಮದ್ದು ಹಾಕುತ್ತಿದ್ದಾಗ ಗುಂಡು ತಲೆಗೆ ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಾನಳ್ಳಿಯ ಕೆರೆಗದ್ದೆಯಲ್ಲಿ ನಡೆದಿದೆ.

ಶಿರಸಿಯ ಹುಲೇಕಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಕಾರ್ತಿಕ್ ಹೆಗಡೆ ಮೃತ ದುರ್ದೈವಿ. ಅಡಿಕೆ ತೋಟಕ್ಕೆ ಮಂಗಗಳು ದಾಳಿ ಇಟ್ಟಿದ್ದರಿಂದ ಕಾರ್ತಿಕ್ ತನ್ನ ತಂದೆ, ತಾಯಿ ಹಾಗೂ ಚಿಕ್ಕಮ್ಮನ ಜೊತೆಗೆ ತೋಟಕ್ಕೆ ತೆರಳಿ ಮಂಗಗಳನ್ನು ಓಡಿಸಲು ಹೋಗಿದ್ದ. ದುರಾದೃಷ್ಟವೆಂದರೆ ಮಂಗಗಳು ತೋಟಬಿಟ್ಟು ಹೋಗದ ಕಾರಣ ಕಾರ್ತಿಕ್ ಬಂದೂಕು ತೆಗೆದುಕೊಂಡು ಹೋಗಲು ಮನೆಗೆ ವಾಪಸ್ ಬಂದಿದ್ದ.

ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡ ಕಾರ್ತಿಕ್, ಕಾಡತೂಸು (ಸೀಸ, ಮದ್ದು ಹಾಗೂ ಗುಂಡುಗಳ ಮಿಶ್ರಣ) ಅನ್ನು ಬಂದೂಕಿನ ನಳಿಕೆಗೆ ಹಾಕಿ ಸರಿಪಡಿಸುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಮದ್ದು ಸಿಡಿದ ಪರಿಣಾಮ ತಲೆಯ ಭಾಗಕ್ಕೆ ಹೊಡೆತ ಬಿದ್ದಿದೆ. ಪರಿಣಾಮ ಮೆದುಳು ಸಿಡಿದು ಮಾರು ದೂರ ಬಿದ್ದಿದೆ. ಸ್ಥಳದಲ್ಲಿಯೇ ಬಿದ್ದಿದ್ದ ಕಾರ್ತಿಕ್ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಗುಂಡಿನ ಸದ್ದು ಕೇಳಿದ ಪೋಷಕರು ಮನೆಗೆ ಬಂದು ಓಡಿಬಂದು ನೋಡಿದಾಗ ಏಕೈಕ ಪುತ್ರ ಕಾರ್ತಿಕ್  ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.

monkeys

ಪೊಲೀಸರು ಬರಲಿಲ್ಲ:
ಈ ಘಟನೆ ಸೋಮವಾರ ಸಂಜೆ ಸುಮಾರು 6.30 ಗಂಟೆಗೆ ನಡೆದಿದೆ. ಹಳ್ಳಿಯಾದ್ದರಿಂದ ದೂರವಾಣಿ ಸಂಪರ್ಕವೂ ಇರದ ಕಾರಣ ಘಟನೆ ತಿಳಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿದ್ದಾಪುರದಲ್ಲಿ ಅರಣ್ಯ ಒತ್ತುವರಿದಾರರು ಮಂಗಳವಾರ ಬಂದ್‍ಗೆ ಕರೆ ಕೊಟ್ಟಿದ್ದರಿಂದ ಅಲ್ಲಿಗೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕೂಡ ತೆರಳಿದ್ದರು. ಇದರಿಂದಾಗಿ ಸುಮಾರು 8 ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

monkey florida herpes b

ಸಿಡಿಯುತ್ತಾ ಬಂದೂಕು!
ತೋಟದಲ್ಲಿ ಮಂಗಗಳನ್ನು ಹೊಡೆಯಲು ಅಥವಾ ಕಾಡು ಪ್ರಾಣಿಗಳನ್ನು ಹೆದರಿಸಲು ಲೈಸೆನ್ಸ್ ಪಡೆದು ಬಂದೂಕನ್ನು ಇಟ್ಟುಕೊಳ್ಳುತ್ತಾರೆ. ಲೋಡ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ನಳಿಕೆಯಿಂದ ಮದ್ದು ಸಿಡಿಯುತ್ತದೆ. ಸ್ಥಳೀಯರು ತಿಳಿಸುವಂತೆ ಕಾರ್ತಿಕ್‍ಗೆ ಕಾಡತೂಸು ತುಂಬುವ ಮಾಹಿತಿ ಇರಲಿಲ್ಲ. ಹೀಗಾಗಿ ಭಾರೀ ಅನಾಹುತ ಸಂಭವಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *