ರಾಯಚೂರು: ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟು, ಎಂಟು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಬುದ್ದಿನ್ನಿ ಬಳಿ ನಡೆದಿದೆ.
18 ವರ್ಷದ ಸದ್ದಾಂ ಲಿಂಗಸುಗೂರು ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡವರು ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಟ್ಟೂರು ಗ್ರಾಮದಿಂದ ಅಮರೇಶ್ವರಕ್ಕೆ ಮದುವೆಗೆ ತೆರಳುತ್ತಿದ್ದ ಲಾರಿಯ ಮೇಲುಗಡೆ ಕುಳಿತಿದ್ದವರಿಗೆ ವಿದ್ಯುತ್ ತಂತಿ ತಗುಲಿದೆ. ಮಕ್ಕಳು ಸೇರಿದಂತೆ ಎಂಟು ಜನರಿಗೆ ಸುಟ್ಟಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಾಳುಗಳನ್ನು ಕೂಡಲೇ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸದ್ದಾಂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.