ಬೆಂಗಳೂರು: ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ರಾಜಧಾನಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗೆಯೇ ದುಷ್ಕೃತ್ಯ ಮೆರೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಗುರುವಾರದಂದು ಪುಲ್ವಾಮದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಉಗ್ರರ ತವರು ಪಾಕಿಸ್ತಾನದ ರಾಕ್ಷಸಿತನಕ್ಕೆ ತಕ್ಕ ಉತ್ತರ ಕೋಡಲೇಬೇಕು. ವಿಶ್ವಸಂಸ್ಥೆ ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕು. ಯೋಧರನ್ನು ಬಲಿಪಡೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಬೇಕು ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು.
ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಪಾಕಿಸ್ತಾನಕ್ಕೆ ಬೆಂಬಲ ಕೊಡುವ ದೇಶಗಳಿಗೂ ಎಚ್ಚರಿಕೆ ಕೊಡಬೇಕು. ನಮ್ಮ ಸೈನಿಕರನ್ನ ಮೋಸದಿಂದ ಬಲಿಪಡೆದ ಯಾರನ್ನೂ ಬಿಡಬಾರದು. ಈ ಬಗ್ಗೆ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜೈಕರ್ನಾಟಕ ಸಂಘಟನೆ ವತಿಯಿಂದ ಮೈಸೂರು ಸರ್ಕಲ್‍ನಲ್ಲಿ ಕೂಡ ಶ್ರದ್ದಾಂಜಲಿ ಸಲ್ಲಿಸಲಾಯಿತು. ಆತ್ಮಾಹುತಿ ದಾಳಿಯಲ್ಲಿ 47 ಯೋಧರ ಸಾವಿನ ಹಿನ್ನೆಲೆ ಪಾಕ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಸೈನಿಕರು ನಮ್ಮ ಹೆಮ್ಮೆ ಎಂದು ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv