ಗದಗ: ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಗದಗ್ ನಲ್ಲಿ ನಡೆದಿದೆ.
ಗದಗ ನಗರ ತೋಂಟದಾರ್ಯ ಮಠದ ಬಳಿ ಸ್ಟೇಷನ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾದ ಯುವಕನನ್ನು ಕರಿಯಪ್ಪ ಎಂದು ಗುರುತಿಸಲಾಗಿದೆ.
ಕರಿಯಪ್ಪ ರಾತ್ರಿ ಮನೆಯ ಹೊರಗೆ ಹಾಗೂ ರಸ್ತೆ ಪಕ್ಕ ನಿಲ್ಲಿಸಿದ ಬೈಕ್ ಗಳನ್ನೇ ಗುರಿಯಾಗಿಸಿಕೊಂಡು ಪೆಟ್ರೋಲ್ ಕದಿಯುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕರಿಯಪ್ಪನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.
ಸದ್ಯ ಪೆಟ್ರೋಲ್ ಕಳ್ಳನನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.